ಯಲಬುರ್ಗಾ: ಮಕ್ಕಳಲ್ಲಿ ಅಡಗಿರುವ ಸುಪ್ತ ಕಲೆಯ ಅನಾವರಣಕ್ಕೆ ಶಿಕ್ಷಕರು ಪ್ರೋತ್ಸಾಹಿಸಬೇಕು ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಫ್.ಎಂ.ಕಳ್ಳಿ ಹೇಳಿದರು.
ಇದನ್ನೂ ಓದಿ: ಶಾಲೆಬಿಟ್ಟ 8 ಮಕ್ಕಳ ವಾಪಸ್ ಕರೆತಂದ ಶಿಕ್ಷಕರು
ತಾಲೂಕಿನ ಚಿಕ್ಕಬನ್ನಿಗೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿ ಹಾಗೂ ಕಲಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ಜತೆಗೆ ಮಕ್ಕಳಲ್ಲಿರುವ ಕೌಶಲ್ಯ ಗುರುತಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಸರ್ಕಾರ ಶಿಕ್ಷಣ ಇಲಾಖೆ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಎತ್ತರಿಸಲು ಹಲವು ಯೋಜನೆ ಜಾರಿಗೊಳಿಸಿದೆ.
ಅದರಲ್ಲಿ ಪ್ರತಿಭಾ ಕಾರಂಜಿ ಪ್ರಮುಖ ವೇದಿಕೆಯಾಗಿದೆ ಎಂದರು. ಶಾಲಾ ಹಂತದಲ್ಲಿ ಏರ್ಪಡಿಸುವ ವಿವಿಧ ಸ್ಪರ್ಧೆಯಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ಕ್ರಿಯಾಶೀಲ ಮನೋಭಾವ ಬೆಳೆಯುವ ಜತೆಗೆ ನಾಯಕತ್ವ ಗುಣ ಬರುತ್ತದೆ. ಆ ನಿಟ್ಟಿನಲ್ಲಿ ಪಾಲಕರು ಮತ್ತು ಶಿಕ್ಷಕರು ಪ್ರೋತ್ಸಾಹಿಸಬೇಕು ಎಂದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವೈ.ಜಿ.ಪಾಟೀಲ್, ಸಿಆರ್‌ಪಿ ರಾಜ್‌ಮಹ್ಮದ್, ಎಸ್ಡಿಎಂಸಿ ಅಧ್ಯಕ್ಷ ಶರಣಪ್ಪ ಕೋನಸಾಗರ, ಗ್ರಾಮದ ಶ್ರೀೀ ಕಲ್ಲಯ್ಯಜ್ಜ , ಗ್ರಾಪಂ ಅಧ್ಯಕ್ಷೆ ಚಂದವ್ವ ರಾಠೋಡ, ಉಪಾಧ್ಯಕ್ಷೆ ದ್ರಾಕ್ಷಾಯಿಣಿ ಬನ್ನಿಕೊಪ್ಪ, ಸದಸ್ಯರಾದ ರೇಣುಕಾ, ಶರಣಪ್ಪ ತಳವಾರ್ ಇದ್ದರು.