ಜಿಲ್ಲೆ

ಬಾಲ್ಯ ವಿವಾಹಕ್ಕೆ ಸಹಕರಿಸಿದರೆ ಕ್ರಮ

ರುದ್ರಪ್ಪ ವಾಲಿ

ಕನಕಗಿರಿ: ಸಾಮೂಹಿಕ ವಿವಾಹ ಆಯೋಜಿಸುವವರು ಅಗತ್ಯ ದಾಖಲೆಗಳೊಂದಿಗೆ ತಹಸಿಲ್ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಅನುಮತಿ ಪಡೆಯುವುದು ಕಡ್ಡಾಯ ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದರು.

ಇಲ್ಲಿನ ಸಿಡಿಪಿಒ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಬಾಲ್ಯ ವಿವಾಹ ನಿಷೇಧ, ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಸೇರಿ ನಾನಾ ಸಮಿತಿಗಳ ಸಭೆಯಲ್ಲಿ ಮಾತನಾಡಿದರು.

ತಾಲೂಕನ್ನು ಬಾಲ್ಯ ವಿವಾಹ ಮುಕ್ತವಾಗಿಸಲು ಸಮಿತಿಯಲ್ಲಿನ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಸಾಮೂಹಿಕ ವಿವಾಹ ಹಮ್ಮಿಕೊಳ್ಳುವ ದೇವಸ್ಥಾನಗಳ ಗೋಡೆಗಳಿಗೆ ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಎಂದು ಬರೆಯಿಸಬೇಕು. ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳ ಆವರಣದ ಗೋಡೆಗಳಿಗೂ ಸಾರ್ವಜನಿಕವಾಗಿ ಕಾಣಿಸುವಂತೆ ಬಾಲ್ಯ ವಿವಾಹ ನಿಷೇಧದ ಶ್ಲೋಗನ್‌ಗಳನ್ನು ಬರೆಯಿಸಬೇಕು. ಸಾಮೂಹಿಕ ವಿವಾಹದಲ್ಲಿ ಬಾಲ್ಯ ವಿವಾಹವಾಗಿದ್ದು ಕಂಡು ಬಂದಲ್ಲಿ ಆಯೋಜಕರು ಸೇರಿ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಬಾಲ್ಯ ವಿವಾಹಕ್ಕೆ ಸಹಕರಿಸಲು ನಕಲಿ ಶಾಲಾ ದೃಢೀಕರಣ ನೀಡಿದರೆ ಅಂತಹ ಮುಖ್ಯಶಿಕ್ಷಕರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಸಮಿತಿಯಿಂದ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಆಯೋಜಿಸಿ ತಾಪಂ ಹಾಗೂ ಸಿಡಿಪಿಒ ಕಚೇರಿಗೆ ವರದಿ ಸಲ್ಲಿಸುವುದು ಕಡ್ಡಾಯ. ನವೆಂಬರ್‌ನಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಹಮ್ಮಿಕೊಂಡು ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಅವರಿಗೆ ಅವಶ್ಯವಿರುವ ಸೌಲಭ್ಯಗಳನ್ನು ಒದಗಿಸಲು ಸಂಬಂಧಿಸಿದ ಇಲಾಖೆ ಮುಂದಾಗಬೇಕು ಎಂದರು.

ತಾಪಂ ಇಒ ರಾಜಶೇಖರ, ಸಿಡಿಪಿಒ ವಿರೂಪಾಕ್ಷಿ, ಶಿಕ್ಷಣ ಸಂಯೋಜಕ ಆಂಜನೇಯ, ಎಎಸ್‌ಐ ಲಕ್ಕಪ್ಪ, ಕಲಾವತಿ, ಪಪಂ ಸಿಬ್ಬಂದಿ ಪ್ರಕಾಶ ಮಹಿಪತಿ, ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕ ಅಮೀನ್‌ಸಾಬ್, ಸಮಾಜ ಕಾರ್ಯಕರ್ತ ರವಿಕುಮಾರ್, ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ನಿರ್ಮಲಾ ಇತರರಿದ್ದರು.