ಕೊಪ್ಪಳ: ಎಲ್ಲ ಆರೋಗ್ಯ ಸೌಲಭ್ಯವಿದ್ದರೂ ಏನೂ ದಕ್ಕದ ಸ್ಥಿತಿ ಕೊಪ್ಪಳ ಜಿಲ್ಲೆ ಸಾರ್ವಜನಿಕರದ್ದು! ಈ ಕಾರಣದಿಂದ ಸಕಾರಿ ಆಸ್ಪತ್ರೆಗಳಲ್ಲಿ ಒಂದೇ ಬೆಡ್ನಲ್ಲಿ ಸರಾಸರಿ ಮೂರು ಮಕ್ಕಳಿಗೆ ಚಿಕಿತ್ಸೆ ನೀಡುವ ಪರಿಸ್ಥಿತಿ ನಿರ್ವಣವಾಗಿದ್ದು, ನಾನಾ ರೋಗಗಳು ಇರುವ ಸೋಂಕಿತ ಶಿಶುಗಳಿಂದ ಇತರ ಮಕ್ಕಳೂ ಅನಾರೋಗ್ಯಕ್ಕೀಡಾಗಿ ಮರಣ ಹೊಂದುತ್ತಿವೆ!
ತಾಲೂಕು, ಉಪ ವಿಭಾಗ ಆಸ್ಪತ್ರೆಗಳಿಗಿಂತ ಜಿಲ್ಲಾಸ್ಪತ್ರೆಯಲ್ಲಿಯೇ ಮರಣ ಪ್ರಮಾಣ ಅಧಿಕವಾಗಿದೆ. ವೈದ್ಯಕೀಯ ವಿಜ್ಞಾನ ಸಂಸ್ಥೆ ಆರಂಭವಾಗಿ ನಾಲ್ಕೈದು ವರ್ಷವಾದರೂ ಆರೋಗ್ಯ ಕ್ಷೇತ್ರ ಸುಧಾರಣೆಯಾಗಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಪ್ರಮಾಣ ಹೆಚ್ಚಿದ್ದು, ಅದಕ್ಕೆ ತಕ್ಕಂತೆ ಮಕ್ಕಳ ಆರೈಕೆಗೆ ಹಾಸಿಗೆಗಳಿಲ್ಲ. 450 ಹಾಸಿಗೆ ಆಸ್ಪತ್ರೆಯಲ್ಲಿ ನವಜಾತ ಶಿಶುಗಳಿಗಾಗಿ ಕೇವಲ 16 ಹಾಸಿಗೆ ಮೀಸಲಿಡಲಾಗಿದೆ.
ಹಾಸಿಗೆ ಕೊರತೆ ನೀಗಿಸಲು ಪ್ರತ್ಯೇಕ 100 ಹಾಸಿಗೆ ಸೌಲಭ್ಯವುಳ್ಳ ತಾಯಿ-ಮಕ್ಕಳ ಆಸ್ಪತ್ರೆ ನಿರ್ವಿುಸಿದ್ದರೂ, ಸರ್ಕಾರದಿಂದ ಹುದ್ದೆಗಳು ಮಂಜೂರಾಗಿಲ್ಲ. ಆಸ್ಪತ್ರೆ ನಿರ್ವಣವಾಗಿ ಆರು ತಿಂಗಳಾದರೂ ಆರೋಗ್ಯ ಸಚಿವರನ್ನೇ ಕರೆಸಿ ಉದ್ಘಾಟನೆ ಮಾಡಬೇಕೆಂದು ನಿಯಮ ವಿಧಿಸಿಕೊಂಡಿರುವ ಅಧಿಕಾರಿಗಳು, ಮಕ್ಕಳು ಸಾಯುತ್ತಿದ್ದರೂ ಆಸ್ಪತ್ರೆ ಆರಂಭಿಸದಷ್ಟು ನಿರ್ದಯಿಗಳಾಗಿದ್ದಾರೆ.
ತಾಲೂಕು, ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನಿಸಿದ ಶಿಶುಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲು ವಿಶೇಷ ಮಕ್ಕಳ ವೆಂಟಿಲೇಟರ್ ಸೌಲಭ್ಯ ಇರುವ ಆಂಬುಲೆನ್ಸ್ ಸಹ ಇಲ್ಲ. 2021ರ ಏಪ್ರಿಲ್ನಿಂದ 2022ರ ಮಾರ್ಚ್ ಅಂತ್ಯದವರೆಗೆ ಜಿಲ್ಲೆಯಲ್ಲಿ 9078 ಹೆರಿಗೆಗಳಾಗಿವೆ. ಕಡಿಮೆ ತೂಕ, ಉಸಿರಾಟ ಸಮಸ್ಯೆ, ಅವಧಿ ಪೂರ್ವ ಪ್ರಸವದಿಂದ 2848 ಮಕ್ಕಳು ಜನಿಸಿವೆ. ಶೇ.50 ಶಿಶುಗಳನ್ನು ಎಸ್ಎನ್ಸಿಯುಗೆ (ಸ್ಪೇಷಲ್ ನ್ಯೂ ಬಾರ್ನ್ ಕೇರ್ ಯುನಿಟ್) ದಾಖಲಿಸಿ ಚಿಕಿತ್ಸೆ ನೀಡಿದರೂ 365 (ಶೇ.21.23) ಮಕ್ಕಳು ಮೃತಪಟ್ಟಿದ್ದು, ರಾಜ್ಯದಲ್ಲಿಯೇ ಅಧಿಕ ಮರಣ ಪ್ರಮಾಣ ದಾಖಲಾಗಿದೆ. ಆದರೂ, ಎಚ್ಚೆತ್ತುಕೊಳ್ಳದ ಅಧಿಕಾರಿಗಳು ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ. ಪರಿಣಾಮ ಏಪ್ರಿಲ್ನಿಂದ ಮೇ ಅಂತ್ಯದವರೆಗೆ 1797 ಹೆರಿಗೆಗಳಾಗಿದ್ದು, ದಿನಕ್ಕೆ ಸರಾಸರಿ ಎರಡರಂತೆ 83 ಶಿಶುಗಳು ಸಾವಿಗೀಡಾಗಿವೆ.
ಇದು ಕೊಪ್ಪಳದ ದುಸ್ಥಿತಿಯಾದರೆ ರಾಯಚೂರು ಶೇ.19.04, ಬಳ್ಳಾರಿ ಶೇ.17.68 ಹಾಗೂ ಕಲಬುರಗಿ ಶೇ.12 ಶಿಶು ಮರಣ ದರವಿದೆ. ಉಳಿದ ಜಿಲ್ಲೆಗಳಲ್ಲಿ ಶೇ.10ಕ್ಕಿಂತ ಕಡಿಮೆ ಇದೆ. ಅಪೌಷ್ಟಿಕತೆ ಹೆಚ್ಚಿರುವ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲೇ ಅತ್ಯಧಿಕ ಶಿಶು ಮರಣ ಸಂಭವಿಸುತ್ತಿದೆ. ಇದರ ನಿಯಂತ್ರಣದಲ್ಲಿ ಸರ್ಕಾರ ಪದೇಪದೆ ಎಡವುತ್ತಿದೆ.
ರಾಜ್ಯದಲ್ಲಿ ಶಿಶುಮರಣ ಪ್ರಮಾಣ ಮೊದಲಿಗಿಂತಲೂ ಕಡಿಮೆಯಾಗುತ್ತಿದೆ. ಹಲವು ಕಾರಣಗಳಿಂದಾಗಿ ಮಕ್ಕಳ ಸಾವಾಗುತ್ತದೆ. ಕೊಪ್ಪಳದಲ್ಲಿ ಸ್ವಲ್ಪ ಸಮಸ್ಯೆಯಾಗಿದ್ದು ಸರಿಪಡಿಸಲಾಗುವುದು. ಎಂಸಿಎಚ್ ಆಸ್ಪತ್ರೆ ಆರಂಭಕ್ಕೆ ಸೂಚಿಸಲಾಗುವುದು. | ಡಾ.ಬಸವರಾಜ ದಬಾಡಿ ಉಪನಿರ್ದೇಶಕ ಮಕ್ಕಳ ಆರೋಗ್ಯ ವಿಭಾಗ, ಬೆಂಗಳೂರು
ಹಳ್ಳಿಗಳಿಗೆ ತಲುಪದ ಆರೋಗ್ಯ ಸೇವೆ: ತಾಯಿ, ಶಿಶು ಮರಣ ತಪ್ಪಿಸಲು ಸರ್ಕಾರ ಹಲವು ಯೋಜನೆ ರೂಪಿಸಿದೆ. ಕೋಟ್ಯಂತರ ರೂ. ಅನುದಾನ ಖರ್ಚಾಗುತ್ತಿದೆ. ಎಲ್ಲ ಗರ್ಭಿಣಿಯರಿಗೆ ಹೆರಿಗೆಯಾಗುವವರೆಗೂ ನಿಯಮಿತ ವಾಗಿ ಪರೀಕ್ಷೆ ಮಾಡಿರುವುದಾಗಿ ಆರೋಗ್ಯಾಧಿ ಕಾರಿಗಳು ಪ್ರತಿ ವರ್ಷ ವರದಿ ನೀಡುತ್ತಿದ್ದಾರೆ. ಆದರೆ, ಕೊಪ್ಪಳದಲ್ಲಿ ಪ್ರತಿ ನಾಲ್ವರು ಗರ್ಭಿಣಿಯಲ್ಲಿ ಕೇವಲ ಇಬ್ಬರನ್ನು ಮಾತ್ರ ಆರೋಗ್ಯ ಸಿಬ್ಬಂದಿ ಸಂರ್ಪಸುತ್ತಿದ್ದಾರೆ. ಗರ್ಭಾವಸ್ಥೆ ಅವಧಿಯಲ್ಲಿ ಮಹಿಳೆಯರಿಗೆ 180 ರಕ್ತ ಹೀನತೆ ನಿವಾರಣೆ ಮಾತ್ರೆಗಳನ್ನು ನೀಡಬೇಕು. ಕೇವಲ ಶೇ.8 ನೀಡುತ್ತಿರುವುದು ಐದು ವರ್ಷಕ್ಕೊಮ್ಮೆ ನಡೆಯುವ ರಾಷ್ಟ್ರೀಯ ಕುಟುಂಬ ಕಲ್ಯಾಣ ಸಮೀಕ್ಷೆಯಲ್ಲಿ ಬಯಲಾಗಿದೆ.