ರಾಯಚೂರು ತಾಲೂಕಿನ ಚಿಕ್ಕಸುಗೂರು ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಚಿಕ್ಕಸುಗೂರಿನಲ್ಲಿ ಪ್ರೌಢಶಾಲೆ ಆರಂಭಿಸಿ

ರುದ್ರಪ್ಪ ವಾಲಿ

ರಾಯಚೂರು: ಚಿಕ್ಕಸುಗೂರು ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸುವಂತೆ ಒತ್ತಾಯಿಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೀಗ ಹಾಕಿ ವಿದ್ಯಾರ್ಥಿಗಳು ಮತ್ತು ಪಾಲಕರು ಸೋಮವಾರ ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಪ್ರೌಢಶಾಲೆ ಇಲ್ಲದ ಕಾರಣಕ್ಕೆ ವಿದ್ಯಾರ್ಥಿಗಳು ರಾಯಚೂರು ಇಲ್ಲವೇ ಶಕ್ತಿನಗರದ ಪ್ರೌಢಶಾಲೆಗಳಿಗೆ ಹೋಗಬೇಕಾದ ಸ್ಥಿತಿಯಿದೆ. ಗ್ರಾಮದ ಶಾಲೆಯ 7ನೇ ತರಗತಿಯಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದರೂ ಶಿಕ್ಷಣ ಇಲಾಖೆ ಪ್ರೌಢಶಾಲೆ ಮಂಜೂರು ಮಾಡಿಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪ್ರೌಢಶಾಲೆ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಇತ್ಯರ್ಥ ಪಡಿಸುವುದಾಗಿ ಶಿಕ್ಷಕರು ತಿಳಿಸಿದರೂ ವಿದ್ಯಾರ್ಥಿಗಳು ಮತ್ತು ಪಾಲಕರು ಅಧಿಕಾರಿಗಳು ಆಗಮಿಸಿ ಪ್ರೌಢಶಾಲೆ ಮಂಜೂರು ಮಾಡುವ ಭರವಸೆ ನೀಡುವವರೆಗೆ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದರು. ಬಿಇಒ ಚಂದ್ರಶೇಖರ ಭಂಡಾರಿ, ಸಿಆರ್‌ಪಿ ಲಕ್ಷ್ಮಣ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಗ್ರಾ.ಪಂ. ಅಧ್ಯಕ್ಷ ಚಿನ್ನಯ್ಯ ನಾಮಾಲಿ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲೇಶ, ಸುರೇಶ ಬಾಬು, ಬಾಷಾ ನಾಯಕ ಇದ್ದರು.