ಕೆ.ಆರ್.ಸಾಗರ: ಕೃಷ್ಣರಾಜಸಾಗರದ ಅಣೆಕಟ್ಟೆ ಬಳಿ ಶನಿವಾರ ಚಿರತೆ ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಶನಿವಾರ ವಿಶ್ವ ವಿಖ್ಯಾತ ಬೃಂದಾವನಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.
ಶನಿವಾರ ಬೆಳಗ್ಗೆ ಕಾವೇರಿ ನೀರಾವರಿ ನಿಗಮದ ಕೆಲಸಗಾರರು ಅಣೆಕಟ್ಟೆ ಬಳಿ ಗಿಡ-ಗಂಟಿ ತೆರವು ಮಾಡುತ್ತಿದ್ದಾಗ ದಕ್ಷಿಣ ದ್ವಾರದ ಬಳಿಯ ನಗುವನ ತೋಟದಿಂದ ಅಣೆಕಟ್ಟೆ ಮೇಲೆ ಚಿರತೆ ಹೋಗುತ್ತಿರುವುದನ್ನು ಕಂಡು ಮೇಲಧಿಕಾರಿಗಳಿಗೆ ತಿಳಿಸಿದರು.
ತಕ್ಷಣ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಉಸ್ತುವಾರಿ ಅಧಿಕಾರಿ ಸಂತೋಷ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಚಿರತೆಯ ಹೆಜ್ಜೆ ಗುರುತುಗಳು ಕಂಡು ಬಂದಿದೆ. ತಕ್ಷಣವೇ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಯಿತು. ಪ್ರವಾಸಿಗರಿಲ್ಲದೇ ಬೃಂದಾವನ ಬಿಕೋ ಎನ್ನುತ್ತಿದೆ.
ಚಿರತೆ ಪ್ರತ್ಯಕ್ಷವಾಗಿರುವ ಕುರಿತು ಶ್ರೀರಂಗಪಟ್ಟಣ ವಲಯ ಅರಣ್ಯ ಅಧಿಕಾರಿಗೆ ಮಾಹಿತಿ ನೀಡಿದ್ದೇವೆ. ಕೆಲ ದಿನಗಳ ಹಿಂದೆ ಕೂಡ ಚಿರತೆ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆವು. ಆದರೆ ಇಲ್ಲಿತನಕ ಚಿರತೆ ಸೆರೆಗೆ ಕ್ರಮವಹಿಸಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಘಾರೂಕ್ ಅಬು ಬೇಸರ ವ್ಯಕ್ತಪಡಿಸಿದ್ದಾರೆ.
ಬೃಂದಾವನಕ್ಕೆ ದೇಶ-ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಒಂದು ವೇಳೆ ಚಿರತೆಯಿಂದ ಪ್ರವಾಸಿಗರಿಗೆ ತೊಂದರೆಯಾದರೆ ಏನು ಮಾಡುವುದು? ಅರಣ್ಯ ಇಲಾಖೆ ಶೀಘ್ರವೇ ಕಾರ್ಯಾಚರಣೆ ನಡೆಸಿ ಚಿರತೆ ಹಿಡಿಯಬೇಕು ಎಂದು ಗ್ರಾಪಂ ಮಾಜಿ ಸದಸ್ಯ ಎಚ್.ಎ.ವಿಜಯಕುಮಾರ್ ಒತ್ತಾಯಿಸಿದ್ದಾರೆ.