ಜಿಲ್ಲೆ

ವಾಟ್ಸಾಪ್‌ಗೆ ಸಂದೇಶ ಕಳುಹಿಸಿ ಖಾತೆಗೆ ಕನ್ನ, ಕಿನ್ನಿಗೋಳಿ ಸುತ್ತಮುತ್ತ ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ

ಮೊಬೈಲ್‌ನಲ್ಲಿ ಸಂದೇಶ ಕಳುಹಿಸಿ ಬ್ಯಾಂಕ್ ಖಾತೆಯಿಂದ ಹಣ ದೋಚುವ ಪ್ರಕರಣಗಳು ಕಿನ್ನಿಗೋಳಿ ಸುತ್ತಮುತ್ತ ಹೆಚ್ಚಾಗುತ್ತಿವೆ. ಕಳೆದ ಹಲವು ವರ್ಷಗಳಿಂದ ಹಲವು ರೀತಿಯಲ್ಲಿ ಸಂದೇಶ ಕಳುಹಿಸಿ ಗ್ರಾಹಕರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ದೋಚುತ್ತಿದ್ದರೆ ಈ ಬಾರಿ ಎ.ಪಿ.ಕೆ. ಎಂಬ ಆ್ಯಪ್ ವಾಟ್ಸ್‌ಆ್ಯಪ್ ಸಂದೇಶ ಮೂಲಕ ಬರುತ್ತದೆ. ಇದನ್ನು ಡೌನ್‌ಲೋಡ್ ಮಾಡಿದ ಸ್ವಲ್ಪ ಹೊತ್ತಿನಲ್ಲೇ ತಮ್ಮ ಖಾತೆಯಲ್ಲಿನ ಹಣ ಖಾಲಿಯಾಗುತ್ತದೆ.


ಕಿನ್ನಿಗೋಳಿಯ ವ್ಯಕ್ತಿಯೊಬ್ಬರು ಈ ರೀತಿಯಲ್ಲಿ 20 ಸಾವಿರ ರೂ. ಕಳೆದುಕೊಂಡಿದ್ದು, ಹೀಗೆ ಅನೇಕ ಮಂದಿ ಹಣ ಕಳೆದುಕೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಸಂದೇಶ ಹಲವು ಜನರಿಗೆ ಬಂದಿದ್ದು, ಹೆಚ್ಚಾಗಿ ತಮ್ಮ ಪರಿಚಯಸ್ಥರ ಮೊಬೈಲ್‌ನಿಂದಲೇ ಬರುತ್ತದೆ. ಅಂದರೆ ಹಲವು ಜನರ ಮೊಬೈಲ್ ಹ್ಯಾಕ್ ಮಾಡಿ ಆ ಮೊಬೈಲ್‌ನಲ್ಲಿ ಸೇವ್ ಆಗಿರುವ ಎಲ್ಲ ನಂಬರ್‌ಗಳಿಗೆ ಎ.ಪಿ.ಕೆ. ಸಂದೇಶ ರವಾನೆಯಾಗುತ್ತದೆ. ಈ ಸಂದರ್ಭ ಸುಲಭವಾಗಿ ಡೌನ್‌ಲೋಡ್ ಆಗುತ್ತದೆ ಎಂಬುದು ಸೈಬರ್ ಕಳ್ಳರ ಅಲೋಚನೆ.

ಮತ್ತೊಂದು ಪ್ರಕರಣದಲ್ಲಿ ನಿಮ್ಮ ಮೊಬೈಲ್‌ಗೆ 10 ಅಂಕೆಗಳ ಒಂದು ಇಂಟರ್‌ನೆಟ್ ಕರೆ ಬರುತ್ತದೆ. ಈ ಕರೆಯನ್ನು ಸ್ವೀಕರಿಸಿದಾಗ ‘ಹೇಳಿ ಮೀರಾ ಫೈನಾನ್ಸ್ ಅಥವಾ ಅಲ್ಪಾ ಫೈನಾನ್ಸ್‌ನಿಂದ ಮಾತಾಡುತ್ತಿದ್ದೇವೆ. ನಿಮ್ಮ ಪರಿಚಯಸ್ಥರ ಹೆಸರು ಹೇಳಿ ನಮ್ಮ ಫೈನಾನ್ಸ್‌ನಿಂದ ಲೋನ್ ತೆಗೆದು ನಿಮಗೆ ಕೊಟ್ಟಿದ್ದಾರಂತೆ. ಈಗ ಆ ಲೋನ್ ನೀವು ಕಟ್ಟಬೇಕಾಗುತ್ತದೆ’ ಈ ರೀತಿ ಹೇಳಿ ಮಾತು ಮುಂದುವರಿಸುತ್ತಾರೆ. ಆದರೆ ಲೋನ್ ತೆಗೆದ ಬಗ್ಗೆ ದಾಖಲೆ ಆ ವ್ಯಕ್ತಿಯ ಮೊಬೈಲ್ ನಂಬರ್ ಅಥವಾ ಫೈನಾನ್ಸ್ ಕಚೇರಿಯ ಸಂಖ್ಯೆಯಾಗಲಿ ನೀಡುತ್ತಿಲ್ಲ. ನಿರಂತರ ಒಂದು ದಿನದಲ್ಲಿ 25ರಿಂದ 30 ಬಾರಿ ಕರೆ ಬರುತ್ತದೆ. ಪ್ರತಿಯೊಂದು ಬಾರಿ ಒಂದೊಂದು ನಂಬರ್‌ನಿಂದ ಕರೆ ಮಾಡಿ ತಾಳ್ಮೆ ಕಳೆದುಕೊಳ್ಳುವಂತೆ ಮಾಡುತ್ತಾರೆ. ಈ ರೀತಿಯ ಬೇರೆ ಬೇರೆ ಪ್ರಕರಣಗಳು ನಡೆಯುತ್ತಿದ್ದು, ಜನರು ಜಾಗ್ರತರಾಗಬೇಕಾಗಿದೆ.