ಜಿಲ್ಲೆ

ಇಂಜಿನಿಯರಿಂಗ್ ಸೀಟ್ ಆಮಿಷವೊಡ್ಡಿ ಉದ್ಯಮಿಗೆ 8 ಲಕ್ಷ ವಂಚನೆ

reporterburban

ಬೆಂಗಳೂರು : ಮೆಡಿಕಲ್, ಇಂಜಿನಿಯರಿಂಗ್ ಸೀಟ್ ಕೊಡಿಸುವ ನೆಪದಲ್ಲಿ ಮೋಸ ಮಾಡುವ ಜಾಲ ಇನ್ನೂ ತಪ್ಪಿಲ್ಲ. ರಾಜಸ್ಥಾನದ ಮೂಲದ ಉದ್ಯಮಿ ಅಮಿತ್ ಶರ್ಮಾ(48) ತನ್ನ ಮಗನಿಗೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಸೀಟ್ ಕೊಡಿಸಲು ಮಧ್ಯವರ್ತಿಗಳಿಗೆ 8 ಲಕ್ಷ ರೂ.ಕೊಟ್ಟು ಮೋಸ ಹೋಗಿದ್ದಾರೆ. ಉದ್ಯಮಿ ನೀಡಿದ ದೂರಿನ ಮೇರೆಗೆ ಜತಿನ್, ಮನೇಶ್ ಕುಮಾರ್ ಮತ್ತು ಪುಸ್ಕರ್ ಎಂಬುವರ ವಿರುದ್ಧ ಸದಾಶಿವನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಮಿತ್, ಮೊಬೈಲ್‌ಗೆ ಜತಿನ್ ಕರೆ ಮಾಡಿ ಮೆಡಿಕಲ್, ಇಂಜಿನಿಯರಿಂಗ್ ಸೀಟ್ ಕೊಡಿಸುವ ಏಜೆನ್ಸಿಯಾಗಿ ಕೆಲಸ ಮಾಡುತ್ತಿದ್ದು, ದೆಹಲಿಯಲ್ಲಿ ಕಚೇರಿ ಇದೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಮ್ಯಾನೇಜ್‌ಮೆಂಟ್ ಕೋಟಾದಲ್ಲಿ ನಿಮ್ಮ ಮಗನಿಗೆ ಕಂಪ್ಯೂಟರ್ ಸೈನ್ಸ್ ಸೀಟ್ ಕೊಡಿಸುತ್ತೆವೆ. 8 ಲಕ್ಷ ರೂ. ಆಗಲಿದೆ ಎಂದು ಹೇಳಿದ್ದಾನೆ.

ಇದನ್ನು ನಂಬಿದ ಅಮಿತ್, ಎಲ್ಲದಕ್ಕೂ ಒಪ್ಪಿಕೊಂಡಿದ್ದಾರೆ. ವಂಚಕ ಜತಿನ್ ಹೇಳಿದಂತೆ ಅ.28ರಂದು ವಿಮಾನದಲ್ಲಿ ಬೆಂಗಳೂರಿಗೆ ಬಂದು ಕಾಲೇಜು ಬಳಿಗೆ ಹೋಗಿದ್ದಾನೆ. ಆ ವೇಳೆಗಾಗಲೇ ಕಾಲೇಜಿನ ಕ್ಯಾಂಟಿನ್‌ನಲ್ಲಿ ಕಾಯುತ್ತಿದ್ದ ಜತಿನ್, ತನ್ನ ಬಳಿಗೆ ಕರೆಸಿಕೊಂಡು 8.4 ಲಕ್ಷ ರೂ. ಮತ್ತು ವಿದ್ಯಾರ್ಥಿಯ ಎಲ್ಲ ಅಸಲಿ ದಾಖಲೆಗಳನ್ನು ಪಡೆದು ಇಲ್ಲಿಯೇ ಕುಳಿತುಕೊಳ್ಳಿ. ಒಳಗೆ ಹೋಗಿ ಕಾಲೇಜಿನ ಆಡಳಿತ ಮಂಡಳಿ ಬಳಿ ಮಾತನಾಡಿಕೊಂಡು ಬರುವುದಾಗಿ ಹೇಳಿ ಹೋಗಿದ್ದಾನೆ.

ಹಣ ಮತ್ತು ಪುತ್ರನ ದಾಖಲೆಗಳನ್ನು ಕೊಟ್ಟು ಕ್ಯಾಂಟಿನ್‌ನಲ್ಲಿ ಕಾಯುತ್ತಿದ್ದ ಅಮಿತ್‌ಗೆ ಎಷ್ಟು ಹೊತ್ತಾದರೂ ಜತಿನ್ ಸುಳಿವು ಸಿಕ್ಕಿಲ್ಲ. ಮೊಬೈಲ್ ನಂಬರ್‌ಗೆ ಕರೆ ಮಾಡಿದಾಗ ಸಂಪರ್ಕಕ್ಕೆ ಪ್ರಯತ್ನಿಸಿದ್ದಾರೆ. ಸಾಧ್ಯವಾಗದೆ ಇದ್ದಾಗ ಮೋಸಕ್ಕೆ ಒಳಗಾಗಿರುವುದು ಮನವರಿಕೆಯಾಗಿ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.