ಜಿಲ್ಲೆ

ಕಾಣೆಯಾಯ್ತು ಮಲೆ ಮಹದೇಶ್ವರನ ಚಿನ್ನದ ಕರಡಿಗೆ! ನಾಪತ್ತೆ ಬೆನ್ನಲ್ಲೇ ಹಲವು ಅನುಮಾನಗಳು ಸೃಷ್ಟಿ!

ಚಾಮರಾಜನಗರ: ಮಲೆ ಮಹದೇಶ್ವರ ಉತ್ಸವ ಮೂರ್ತಿಯ ಮೇಲಿದ್ದ ಚಿನ್ನದ ಕರಡಿಗೆ ನಾಪತ್ತೆಯಾಗಿರುವ ಆರೋಪ ಕೇಳಿಬಂದಿದೆ.

ಚಿನ್ನದ ಕರಡಿಗೆ ಸರದಿ ಅರ್ಚಕರ ಸುಪರ್ದಿನಲ್ಲಿತ್ತು. ಇದು ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಒಡೆವೆಯಾಗಿದ್ದು, ನಾಪತ್ತೆ ಪ್ರಕರಣ ಬೆಳಕಿಗೆ ಬಂದರೂ ಅಧಿಕಾರಿಗಳು ಮೌನ ವಹಿಸಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.

ಚಿನ್ನದ ಕರಡಿಗೆ ಕಾಣೆಯಾಗಿ ಐದಾರು ದಿನ ಕಳೆದರೂ ಯಾವುದೇ ದೂರು ದಾಖಲಾಗಿಲ್ಲ. ಇದರ ನಡುವೆ ಅರ್ಚಕರ ಗುಂಪುಗಳ ನಡುವಿನ ಮುಸುಕಿನ ಗುದ್ದಾಟದ ಫಲ ಚಿನ್ನದ ಕರಡಿಗೆ ನಾಪತ್ತೆಯಾಗಿರುವ ಸಂಶಯ ವ್ಯಕ್ತವಾಗಿದೆ. ಅರ್ಚಕರಲ್ಲೇ ಮೂರು ಗುಂಪು ಇದೆ. ಅರ್ಚಕರ ಗುಂಪುಗಳ ನಡುವಿನ ಒಳ ವೈಮನಸ್ಸನಿ ಪರಿಣಾಮ ಎನ್ನಲಾಗಿದೆ.

ಒಂದು ಗುಂಪಿಗೆ ಕೆಟ್ಟ ಹೆಸರು ತರಲು ಮತ್ತೊಂದು ಗುಂಪು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಚಿನ್ನದ ಕರಡಿಗೆಯನ್ನು ಹುಂಡಿಗೆ ಹಾಕಿರಬಹುದಾದ ಅನುಮಾನವೂ ಇದೆ. ಹೀಗಾಗಿ ಇಂದು ನಡೆಯಲಿರುವ ಹುಂಡಿ ಎಣಿಕೆ ವೇಳೆ ಚಿನ್ನದ ಕರಡಿಗೆ ಸಿಕ್ಕರೆ ಪ್ರಕರಣ ಮುಚ್ಚಿಹಾಕುವ ಯತ್ನ ನಡೆದಿದೆ ಎನ್ನಲಾಗಿದೆ. ಇಲ್ಲವೇ ಸರದಿ ಅರ್ಚಕರಿಂದ ಹೊಸ ಚಿನ್ನದ ಕರಡಿಗೆ ಮಾಡಿಸಿ ಪ್ರಕರಣಕ್ಕೆ ಇತಿಶ್ರಿ ಹಾಡಲೂ ಸಹ ನಿರ್ಧಾರ ಮಾಡಿದ್ದಾರೆನ್ನಲಾಗಿದೆ.

ಸದ್ಯ ಮಲೆ ಮಹದೇಶ್ವರನ ಚಿನ್ನದ ಕರಡಿಗೆ ನಾಪತ್ತೆಯಾಗಿರುವುದು ಇದೀಗ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇಂದು ಚಿನ್ನದ ಕರಡಿಗೆ, ನಾಳೆ ಇತರೆ ಚಿನ್ನದ ಒಡವೆ ನಾಪತ್ತೆಯಾದರೆ ಯಾರು ಜವಬ್ದಾರರೆಂದು ಪ್ರಶ್ನಿಸಿದ್ದಾರೆ. (ದಿಗ್ವಿಜಯ ನ್ಯೂಸ್​)