ಸುಳ್ಯ: ಗೊತ್ತಿರುವ ಭಾಷೆಯಲ್ಲಿ ಕಲಿತಾಗ ವಿಷಯಗಳು ಬಹಳ ವೇಗವಾಗಿ ಅರ್ಥವಾಗುತ್ತದೆ. ಯಾವುದೇ ಭಾಷೆ ಕಲಿತರೂ ತಾಯಿನುಡಿ ಮರೆಯಬೇಡಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.
ಮಂಗಳವಾರ ಸ್ನೇಹ ಶಾಲೆಗೆ ಭೇಟಿ ನೀಡಿ ಮಾತನಾಡಿದರು. ಡಾ.ಪುರುಷೋತ್ತಮ ಬಿಳಿಮಲೆ ಅವರನ್ನು ಸನ್ಮಾನಿಸಲಾಯಿತು.
ಸ್ನೇಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಮಾತನಾಡಿ, ನಮ್ಮ ಶಾಲೆ ಕನ್ನಡ ಮಾಧ್ಯಮವಾಗಿಯೇ ಉಳಿದಿದೆ. ಇದಕ್ಕೆ ಕಾರಣ ಕನ್ನಡದ ಮೇಲಿರುವ ಪ್ರೀತಿ ಹಾಗೂ ಜ್ಞಾನವನ್ನು ಅರ್ಥ ಮಾಡಿಕೊಂಡು ಕಲಿಯಬೇಕೆಂಬ ನೀತಿ ಎಂದರು.
ಸುಳ್ಯ ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಉಪಸ್ಥಿತರಿದ್ದರು. ಸಾಹಿತ್ಯ ಪರಿಷತ್ ವತಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಚಿತ್ರಗಳನ್ನು ರಾಜ್ಯೋತ್ಸವದ ಪೂರ್ವಭಾವಿಯಾಗಿ ಅನಾವರಣಗೊಳಿಸಲಾಯಿತು.
ಶಿಕ್ಷಕ ದೇವಿಪ್ರಸಾದ ಜಿ.ಸಿ. ಪಾಡ್ದನ ಹೇಳಿ ಚಾಲನೆ ನೀಡಿದರು. ಮುಖ್ಯಶಿಕ್ಷಕಿ ಜಯಲಕ್ಷ್ಮೀ ದಾಮ್ಲೆ ಸ್ವಾಗತಿಸಿದರು. ಶಿಕ್ಷಕಿ ಗಾಯತ್ರಿ ಬಿ.ಎಸ್ ವಂದಿಸಿದರು. ಶಿಕ್ಷಕಿ ಸವಿತಾ ಎಂ. ನಿರೂಪಿಸಿದರು.