ತುಮಕೂರು: ಮೊನ್ನೆಮೊನ್ನೆಯಷ್ಟೇ ಜ್ಯೋತಿಷ್ಯ ಕೇಳುವವರ ಸೋಗಿನಲ್ಲಿ ಬಂದು ಜ್ಯೋತಿಷಿಗೇ ಹಲ್ಲೆ ಮಾಡಿ ಚಿನ್ನಾಭರಣ, ನಗದು ಸುಲಿಗೆ ಮಾಡಿಕೊಂಡು ಹೋಗಿದ್ದರು. ಇದೀಗ ಅಂಥದ್ದೇ ಇನ್ನೊಂದು ಪ್ರಕರಣ ನಡೆದಿದೆ.
ಇಲ್ಲೊಂದು ಕಡೆ ಗ್ರಾಹಕರಂತೆ ಬಂದವರು ಕಣ್ಣಿಗೆ ಕಾರಪುಡಿ ಎರಚಿ ಅಂಗಡಿಯಾಕೆಯ ಸರವನ್ನೇ ಕಿತ್ತುಕೊಂಡು ಪರಾರಿಯಾಗಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಹಾಡಹಗಲೇ ಇಂಥದ್ದೊಂದು ಪ್ರಕರಣ ನಡೆದಿದೆ. ತುಮಕೂರಿನ ಹೆಬ್ಬೂರು ಕಟ್ಟೆಗೊಲ್ಲಹಳ್ಳಿ ಗ್ರಾಮದಲ್ಲಿ ಈ ದುಷ್ಕೃತ್ಯ ನಡೆದಿದೆ. ಅಂಗಡಿಯಾಕೆ ರೂಪ ಸರ ಕಳೆದುಕೊಂಡವರು.
ಇಂದು ತಮ್ಮ ಅಂಗಡಿಗೆ ಗ್ರಾಹಕರ ಥರ ಬಂದಿದ್ದ ಮೂವರು ಕಾರದ ಪುಡಿಯನ್ನು ಎರಚಿ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದಾರೆ. ಸರ ಸುಮಾರು 50 ಗ್ರಾಂ ತೂಕವಿತ್ತು ಎಂದು ರೂಪಾ ದೂರು ನೀಡಿದ್ದಾರೆ. ಹೆಬ್ಬೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ಹಾಗೂ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.