ಜಿಲ್ಲೆ

ಎಂಟು ವರ್ಷದಿಂದ ಒಂದೇ ಒಂದು ಭ್ರಷ್ಟಾಚಾರದ ಕಪ್ಪುಚುಕ್ಕೆ ಇಲ್ಲ, ನಮ್ಮದು ಶುದ್ಧ ಹಸ್ತದ ಸರ್ಕಾರ: ಪ್ರಲ್ಹಾದ್​ ಜೋಶಿ

ಮೈಸೂರು: ಕಳೆದ 8 ವರ್ಷದಲ್ಲಿ ಒಂದೇ ಒಂದು ಭ್ರಷ್ಟಾಚಾರ ನಡೆದಿಲ್ಲ. ನಮ್ಮ ವಿರೋಧಿಗಳು ಕೂಡ ಆರೋಪ ಮಾಡಲು ಅವಕಾಶ ಕೊಟ್ಟಿಲ್ಲ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅತ್ಯಂತ ಶುದ್ಧ ಸರ್ಕಾರ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಬಣ್ಣಿಸಿದ್ದಾರೆ.

ಮಹಾರಾಜ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಸ್ವಾಗತ ಭಾಷಣ ಆರಂಭಿಸಿದ ಅವರು, ಭಾರತದ ಯೋಗವನ್ನು ಗುರುತಿಸುವಂತೆ ಮಾಡಿ, ಇಂದು ಮೈಸೂರಿನಲ್ಲಿ ಪ್ರಧಾನಿ ಬಂದಿದ್ದಾರೆ. ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಅವರ ಮೇಲೆ ಸದಾ ಇರಲಿ ಎಂದರು.

ದಣಿವರಿಯದ ನಾಯಕ, ದಣಿವನ್ನೇ ಕಾಣದ ನಮ್ಮ ನಾಯಕನಿಗೆ ಸಾಂಸ್ಕೃತಿಕ ನಗರಿ ಮೈಸೂರಿಗೆ ಸ್ವಾಗತ, ಅಯ್ಯಂಗಾರ್​ ಜನಿಸಿದ ನಾಡಿನದಲ್ಲೇ ಮೊದಿ ಅವರಿಂದ ಈ ಬಾರಿ ಯೋಗ ದಿನಾಚರಣೆ ಮಾಡಲಾಗುತ್ತಿದೆ.

ಬೆಂಗಳೂರು -ಮೈಸೂರು ರಸ್ತೆ ದಶಪಥ ರಸ್ತೆ ಸೇರಿದಂತೆ ಮೈಸೂರಿನಲ್ಲೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಪ್ರಧಾನಿ ಸದಾ ಬೆಂಬಲ ನೀಡುತ್ತಾ ಬಂದಿದ್ದಾರೆ ಎಂದು ಹೇಳಿದರು.

ಸಮಾರಂಭದಲ್ಲಿ ರಾಜ್ಯಪಾಲ ಥಾವರ್​ ಚಂದ್​ಗೆಹ್ಲೋಟ್, ಸಚಿವ ಕೆ.ಸುಧಾಕರ್, ಸಂಸದರಾದ ಪ್ರತಾಪ್​ ಸಿಂಹ,ಸುಮಲತಾ ಅಂಬರೀಶ್ ಸೇರಿದಂತೆ ಹಲವು ಗಣ್ಯರು ಇದ್ದರು.