ಜಿಲ್ಲೆ

ಆದಿಚುಂಚನಗಿರಿ ಕೇತ್ರದ ಆಮ್ಲಜನಕ ಘಟಕ ಲೋಕಾರ್ಪಣೆ; ದೆಹಲಿಯಿಂದಲೇ ಉದ್ಘಾಟಿಸಿದ್ರು ಕೇಂದ್ರ ಸಚಿವರು

ಬೆಂಗಳೂರು: ಕರೊನಾ ಸಾಂಕ್ರಾಮಿಕ ಪಿಡುಗನ್ನು ಎದುರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಆದಿಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಸಾರ್ವಜನಿಕ ಹಿತದೃಷ್ಟಿಯಿಂದ ಹೆಚ್ಚಿನ ಸಾಮರ್ಥ್ಯವುಳ್ಳ ಆಮ್ಲಜನಕ ಉತ್ಪಾದನಾ ಘಟಕವನ್ನು ಇಂದು ಲೋಕಾರ್ಪಣೆಗೊಳಿಸಿದೆ.

ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರ ಮುಂದಾಲೋಚನೆ ಫಲವಾಗಿ ನಿರ್ಮಾಣಗೊಂಡಿರುವ ಈ ಘಟಕವನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಇಂದು ದೆಹಲಿಯಿಂದ ಆನ್‌ಲೈನ್ ಮೂಲಕ ಉದ್ಘಾಟನೆ ಮಾಡಿದರು. ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ಬಳಿ ಇರುವ ಎಐಎಂಎಸ್​ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಈ ಘಟಕ ನಿರ್ಮಾಣಗೊಂಡಿದೆ. ಈ ಘಟಕ ಪ್ರತಿನಿಮಿಷಕ್ಕೆ 700 ಲೀಟರ್​ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಕೋವಿಡ್ ವೇಳೆ ತೀವ್ರವಾಗಿ ಎದುರಾದ ಆಮ್ಲಜನಕ ಕೊರತೆಯನ್ನು ಗಂಭೀರವಾಗಿ ಪರಿಗಣಿಸಿದ ಶ್ರೀಗಳು ಕುದುರೆಮುಖ ಕಬ್ಬಿಣದ ಅದಿರು ಕಂಪನಿಯೊಂದಿಗೆ ಮಾತುಕತೆ ನಡೆಸಿ ತಮ್ಮ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರನ್ನು ಒಳಗೊಂಡಂತೆ ವಿಶೇಷ ಸಮಿತಿಯೊಂದನ್ನು ರಚಿಸಿದ್ದರು. ಆ ಸಮಿತಿ ಆಮ್ಲಜನಕ ಉತ್ಪಾದನಾ ಘಟಕದ ಅಗತ್ಯದ ಬಗ್ಗೆ ಶಿಫಾರಸು ಮಾಡಿತ್ತು. ಅದರನ್ವಯ ಉಪಕರಣಗಳನ್ನು ಯುರೋಪ್‌ನಿಂದ ಅಮದು ಮಾಡಿಕೊಂಡು ಘಟಕವನ್ನು ಸ್ಥಾಪನೆ ಮಾಡಲಾಗಿದೆ.

ಅತ್ಯುನ್ನತ ತಂತ್ರಜ್ಞಾನ ಹೊಂದಿರುವ ಈ ಘಟಕ ಒಂದು ನಿಮಿಷಕ್ಕೆ 700 ಲೀಟರ್ ಅನಿಲ ರೂಪದ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 143 ಸಿಲಿಂಡರ್ ಹೊಂದಿರುವ ಆಮ್ಲಜನಕ ಸಾಮರ್ಥ್ಯಕ್ಕೆ ಇದು ಸಮವಾಗಿದೆ. ಇದರಿಂದ ಏಕಕಾಲಕ್ಕೆ 150 ಆಮ್ಲಜನಕ ಅವಲಂಬಿತ ರೋಗಿಗಳಿಗೆ ಅನುಕೂಲವಾಗಲಿದೆ ಎಂದು ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದ ಸ್ವಾಮೀಜಿ ವಿವರಣೆ ನೀಡಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್, ಕೆಐಒಸಿ ಲಿಮಿಟೆಡ್‌ ಮುಖ್ಯಸ್ಥರು ಹಾಗೂ ಮಠದ ಮತ್ತಿತರರು ಭಾಗವಹಿಸಿದ್ದರು.