ಜಿಲ್ಲೆ

ಹಾಸನ| ಜಗಳ ಬಿಡಿಸಲು ಹೋದ ಪೊಲೀಸ್​ ಪೇದೆ ಮೇಲೆ ಮಾರಣಾಂತಿಕ ಹಲ್ಲೆ

Webdesk - Manjunatha B

ಹಾಸನ: ಆಘಾತಕಾರಿ ಘಟನೆಯೊಂದರಲ್ಲಿ ಕರ್ತವ್ಯ ನಿರತ ಪೊಲೀಸ್​ ಅಧಿಕಾರಿ ಮೇಲೆ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನಲ್ಲಿ ನಡೆದಿದೆ.

ಯಸಳೂರು ಪೊಲೀಸ್​ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ಶರತ್​ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ಹಿನ್ನಲೆ

ಯಸಳುರು ಪೊಲೀಸ್​ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ ಶರತ್​ ಜೂನ್​ 15ರಂದು ತಮ್ಮ ಸ್ನೇಹಿತರೊಬ್ಬರ ಮಗಲ ನಾಮಕರಣ ಸಮಾರಂಭದಲ್ಲಿ ಭಾಗಿಯಾಗಲು ಸಾಂದರ್ಭಿಕ ರಜೆ ತೆಗೆದುಕೊಂಡಿದ್ದರು. ಹೊಳೆನರಸೀಪುರದ ನಗರದಲ್ಲಿರುವ ಮಳಲಿ ದೇವಸ್ಥಾನದ ಬಳಿ ಇರುವ ಕನ್ವೆನ್​ಷನ್​​ ಹಾಲ್​ನಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು.

ಹಲ್ಲೆಯ ದೃಶ್ಯ

ಕನ್ವೆನ್​ಷನ್ ಹಾಲ್​ ಮುಂಭಾಗ ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸುತ್ತಿತ್ತು. ಈ ವೇಳೆ ಮಧ್ಯಪ್ರವೇಶಿಸಿದ ಶರತ್​ ಜಗಳವನ್ನು ಬಿಡಿಸಲು ಮುಂದಾಗಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಿಥುನ್​, ಲೋಹಿತ್​, ನಟರಾಜು ಹಾಗೂ ಸ್ನೇಹಿತರ ಗುಂಪು ಶರತ್​ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡು ಶರತ್​ ಸ್ಥಳದಲ್ಲೇ ಕುಸಿದು ಬೀಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಶರತ್​ ಕುಸಿದು ಬಿದ್ದ ನಂತರ ದುಷ್ಕರ್ಮಿಗಳು ಅವರ ಮೇಲೆ ಕಲ್ಲುಗಳನ್ನು ಎಸೆಯುತ್ತ, ಮಚ್ಚಿನಿಂದ ಬೀಸುತ್ತ, ಪ್ಲ್ಯಾಸ್ಟಿಕ್​ ಕುರ್ಚಿಯಿಂದ ಅಮಾನುಷವಾಗಿ ಹಲ್ಲೆ ನಡೆಸುತ್ತಾರೆ. ಆ ಬಳಿಕ ಅವರ ದೇಹದ ಮೇಲೆ ನಿಂತು ಕುಣಿಯಲಾರಂಭಿಸುತ್ತಾರೆ. ಮಿಥುನ್​, ಲೋಹಿತ್​, ನಟರಾಜು ಹಾಗೂ ಸ್ನೇಹಿತರ ಗುಂಪು ಪೇದೆ ಶರತ್​ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದು, ಪ್ರಕರಣ ಸಂಬಂಧ ಹೊಳೆನರಸೀಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.