ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒಂದೇ ದಿನ 104 ಜೂಜುಕೋರರನ್ನು ಬಂಧಿಸಲಾಗಿದೆ. ಸಿಸಿಬಿ ಅಧಿಕಾರಿಗಳು ನಗರದ ಕೆಲವು ಪ್ರಮುಖ ಕ್ಲಬ್ಗಳ ಮೇಲೆ ದಾಳಿ ನಡೆಸಿ ಈ ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.
ನಗರದಲ್ಲಿ ಸಂಪಿಗೆಹಳ್ಳಿ, ಹಲಸೂರು, ಬಾಣಸವಾಡಿ, ಇಂದಿರಾನಗರದಲ್ಲಿರುವ ಜೂಜು ಅಡ್ಡೆಗಳ ಮೇಲೆ ಪೊಲೀಸರು ಶನಿವಾರ ತಂಡೋಪತಂಡವಾಗಿ ದಾಳಿ ನಡೆಸಿದ್ದಾರೆ. ಜೂಜು ಅಡ್ಡೆಗಳ ವಿರುದ್ಧದ ಅಭಿಯಾನದ ಸಲುವಾಗಿ ಸಿಸಿಬಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತ ಜೂಜುಕೋರರಿಂದ ಒಟ್ಟು 4 ಲಕ್ಷ ರೂ. ನಗದು, ಬೆಟ್ಟಿಂಗ್ ಕಾಯಿನ್ಗಳನ್ನು ಜಪ್ತಿ ಮಾಡಲಾಗಿದೆ.
ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿಂಗ್ಸ್ ವಿನ್ನರ್ ಕ್ಲಬ್ ಮೇಲೆ ದಾಳಿ ನಡೆಸಿ ಬೆಟ್ಟಿಂಗ್ ಕಾಯಿನ್ಸ್, ಟೇಬಲ್, ಕುರ್ಚಿಗಳನ್ನು ಜಪ್ತಿ ಮಾಡಲಾಗಿದೆ. ಹಲಸೂರು ಠಾಣಾ ವ್ಯಾಪ್ತಿಯ ಸ್ಟಾರ್ ಲಿಯೋನ್ಸ್ ಕ್ಲಬ್, ಬಾಣಸವಾಡಿಯ ಗೌರಿ ಸ್ಪೋರ್ಟ್ಸ್ ಆ್ಯಂಡ್ ರಿಕ್ರಿಯೇಷನಲ್ ಅಸೋಸಿಯೇಷನ್, ಇಂದಿರಾನಗರ ಠಾಣಾ ವ್ಯಾಪ್ತಿಯ ಕ್ಯಾಂಬ್ರಿಡ್ಜ್ ರಿಕ್ರಿಯೇಷನಲ್ ಕ್ಲಬ್ ಮೇಲೆ ದಾಳಿ ನಡೆಸಲಾಗಿದೆ.