ಬೆಂಗಳೂರು: ಫೋನ್ ಟ್ಯಾಪಿಂಗ್ ಪ್ರಕರಣವೊಂದರ ಕುರಿತಂತೆ ಕೋರ್ಟ್ ನೀಡಿರುವ ಆದೇಶ ಹೊರಬಿದ್ದಿದ್ದು, ಇದೀಗ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಡುವಿನ ಹಗ್ಗ-ಜಗ್ಗಾಟ ಮತ್ತಷ್ಟು ಚುರುಕುಗೊಳ್ಳುವ ಲಕ್ಷಣಗಳು ಗೋಚರಿಸಿವೆ. ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಹೊರಡಿಸಿರುವ ಆದೇಶ ಈ ಬೆಳವಣಿಗೆಗಳಿಗೆ ಕಾರಣವಾಗಿದೆ.
ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಭಾಸ್ಕರ್ ರಾವ್ ಅವರು ಸಿಬಿಐ ಬಿ-ರಿಪೋರ್ಟ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದ್ದರೆ, ಮತ್ತೊಂದೆಡೆ ಸಿಬಿಐ ಅಧಿಕಾರಿಗಳು ಸಲ್ಲಿಸಿರುವ ಬಿ-ರಿಪೋರ್ಟ್ ಕೂಡ ನ್ಯಾಯಾಲಯದಿಂದ ತಿರಸ್ಕೃತಗೊಂಡಿದೆ.
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಮೈತ್ರಿ ಸರ್ಕಾರದ ಅವಧಿಯಲ್ಲಿ 2018ರ ಆಗಸ್ಟ್ 1ರಿಂದ ಅಲೋಕ್ಕುಮಾರ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಫೋನ್ ಕರೆಗಳನ್ನು ಕದ್ದು ಆಲಿಸಿದ್ದರು ಎಂದು ಅನರ್ಹ ಶಾಸಕ್ ಎಚ್. ವಿಶ್ವನಾಥ್ ಸೇರಿ ಕೆಲವು ಶಾಸಕರು ಆರೋಪಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರ ಕರೆಯನ್ನೂ ಅಲೋಕ್ಕುಮಾರ್ ಕದ್ದು ಆಲಿಸಿದ್ದರು ಎನ್ನಲಾಗಿದೆ. ನಂತರ ಪ್ರಕರಣವನ್ನು ಬಿ.ಎಸ್. ಯಡಿಯೂರಪ್ಪ ಅವರು ಸಿಬಿಐ ತನಿಖೆಗೆ ವಹಿಸಿದ್ದರು.
ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳು ಅಲೋಕ್ಕುಮಾರ್ ಅವರಿಗೆ ಸಂಬಂಧಿಸಿದಂತೆ ಬಿ-ರಿಪೋರ್ಟ್ ಸಲ್ಲಿಸಿದ್ದರು. ಆದರೆ ಇದನ್ನು ಪ್ರಶ್ನಿಸಿ ಭಾಸ್ಕರ್ ರಾವ್ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದ್ದು, ಬಿ-ರಿಪೋರ್ಟ್ ಕೂಡ ರದ್ದುಗೊಳಿಸಿದೆ. ಮಾತ್ರವಲ್ಲದೆ ಪುನಃ ತನಿಖೆ ನಡೆಸುವಂತೆ ವರದಿ ಸಲ್ಲಿಸುವಂತೆ ಆದೇಶಿಸಿದೆ. ಇದರಿಂದ ಅಲೋಕ್ಕುಮಾರ್ ಅವರಿಗೆ ಮತ್ತೆ ಟೆನ್ಷನ್ ಉಂಟಾಗಿದ್ದರೂ ಅಚ್ಚರಿ ಇಲ್ಲ ಎನ್ನಲಾಗಿದೆ.