ಜಿಲ್ಲೆ

ಮಾಜಿ ಸೈನಿಕ ಸಹಿತ ನಾಲ್ವರ ಬಂಧನ, ಇಡ್ಯಾ ನಗದು, ಚಿನ್ನಾಭರಣ ಕಳವು ಪ್ರಕರಣ

Dakshina Kannada

ಮಂಗಳೂರು: ಸುರತ್ಕಲ್ ಇಡ್ಯಾದ ಅಪಾರ್ಟ್‌ಮೆಂಟ್‌ನಲ್ಲಿ ಆಗಸ್ಟ್ 17ರಂದು ನಡೆದಿದ್ದ 51 ಲಕ್ಷ ರೂ. ಹಾಗೂ ಚಿನ್ನಾಭರಣ ಕಳ್ಳತನಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಾಜಿ ಸೈನಿಕ, ಫ್ಲಾೃಟ್‌ನಲ್ಲಿ ವಾಸವಿದ್ದ ಅಪಾರ್ಟ್‌ಮೆಂಟ್ ಅಸೋಸಿಯೇಶನ್ ಕಾರ್ಯದರ್ಶಿ ನವೀನ್, ಬೆಳ್ತಂಗಡಿಯ ಸಂತೋಷ್, ಕೇರಳ ಮೂಲದ ರಘು ಮತ್ತು ಅಮೇಶ್ ಎ. ಬಂಧಿತರು. ಕೇರಳ ಮೂಲದ ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳಿಂದ 30,85,710 ರೂ. ನಗದು ಹಾಗೂ 224 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇಡ್ಯಾದ ಜಾರ್ಡಿನ್ ಅಪಾರ್ಟ್‌ಮೆಂಟ್‌ನಲ್ಲಿ ಆರೋಪಿಗಳು ರಾತ್ರಿ ವೇಳೆ ವಿದ್ಯಾ ಪ್ರಭು ಎಂಬುವರ ಫ್ಲಾೃಟ್‌ಗೆ ಬಾಲ್ಕನಿ ಮೂಲಕ ಪ್ರವೇಶಿಸಿ ಕಳವು ಮಾಡಿದ್ದರು. ಇದಕ್ಕೆ ಸಂಬಂಧಿಸಿ ಸೆ.15ರಂದು ಸುರತ್ಕಲ್ ಪೊಲೀಸರು ತಿರುವನಂತಪುರದ ಆರೋಪಿಗಳಿಬ್ಬರನ್ನು ಬಂಧಿಸಿದ್ದರು. ತನಿಖೆ ಮುಂದುವರಿದಾಗ ಈ ಕಳ್ಳತನ ರೂಪಿಸಿದ್ದು, ಅದೇ ಅಪಾರ್ಟ್‌ಮೆಂಟ್ ಕಾರ್ಯದರ್ಶಿ, ಸೇನೆಯಲ್ಲಿ 15 ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತರಾಗಿದ್ದ ನವೀನ್ ಎಂಬ ವಿಷಯ ಬೆಳಕಿಗೆ ಬಂದಿದೆ.

ನವೀನ್ ಸುರತ್ಕಲ್‌ನ ಬಾರ್‌ನಲ್ಲಿ ಮ್ಯಾನೇಜರ್ ಆಗಿದ್ದು, ಅದೇ ಬಾರ್‌ನಲ್ಲಿ ವೇಟರ್ ಆಗಿದ್ದ ಬೆಳ್ತಂಗಡಿಯ ಸಂತೋಷ್‌ನನ್ನು ಪ್ರಕರಣಕ್ಕೆ ಸಂಬಂಧಿಸಿ ಸೆ.18ರಂದು ಬಂಧಿಸುವಲ್ಲಿ ಎಸಿಪಿ ಬೆಳ್ಳಿಯಪ್ಪ ಹಾಗೂ ಸುರತ್ಕಲ್ ಇನ್‌ಸ್ಪೆಕ್ಟರ್ ಚಂದಪ್ಪ ತಂಡ ಯಶಸ್ವಿಯಾಗಿದೆ ಎಂದು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ತಿಳಿಸಿದರು.

ಡಿಸಿಪಿ ವಿನಯ್ ಗಾಂವ್ಕರ್, ಎಸಿಪಿ ಬೆಳ್ಳಿಯಪ್ಪ ಸುದ್ದಿಗೋಷ್ಠಿಯಲ್ಲಿದ್ದ್ದರು.

ವಾಸವಿಲ್ಲದಿದ್ದುದರಿಂದ ಸಂಚು: ಸುರತ್ಕಲ್‌ನಲ್ಲಿ ಪೆಟ್ರೋಲ್ ಬಂಕ್ ಹೊಂದಿದ್ದ ವಿದ್ಯಾ ಪ್ರಭು ಅವರ ಫ್ಲಾೃಟ್‌ನಲ್ಲಿ ಯಾರೂ ವಾಸ ಇರಲಿಲ್ಲ. ಅವರಿಗೆ ಬೇರೆ ಸ್ವಂತ ಮನೆ ಇದ್ದು, ಆಗಾಗ್ಗೆ ಬಂದು ಹೋಗುತ್ತಿದ್ದರು. ಇದನ್ನು ಅರಿತು ಅದೇ ಫ್ಲಾೃಟ್‌ನಲ್ಲಿ ಮೂರು ವರ್ಷಗಳಿಂದ ವಾಸವಿರುವ ನವೀನ್ ಇತರ ಆರೋಪಿಗಳ ಜತೆ ಸೇರಿ ಕಳವಿಗೆ ಸ್ಕೆಚ್ ಹಾಕಿದ್ದ. ಆರೋಪಿಗಳು ಕಳವು ಮಾಡಿದ ಹಣ ದುಂದು ವೆಚ್ಚ ಮಾಡಿದ್ದಾರೆ ಎಂದು ಕಮಿಷನರ್ ವಿಕಾಸ್ ಕುಮಾರ್ ತಿಳಿಸಿದ್ದಾರೆ.