ಪುತ್ತೂರು ಗ್ರಾಮಾಂತರ: ಉಪ್ಪಳಿಗೆಯಲ್ಲಿ ಅ.20ರಂದು ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ‘ದೀಪೋತ್ಸವ’ ಕಾರ್ಯಕ್ರಮದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಭಾಷಣ ಮಾಡಿದ ಆರೋಪದಲ್ಲಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲ್ಲಡ್ಕ ಪ್ರಭಾಕರ ಭಟ್ ಮಹಿಳೆಯರ ಘನತೆಗೆ ಧಕ್ಕೆಯುಂಟು ಮಾಡುವ, ಮಹಿಳೆಯರನ್ನು ಅವಮಾನಿಸುವ, ಧಾರ್ಮಿಕ ಭಾವನೆಗಳಿಗೆ ಮತ್ತು ಸಾರ್ವಜನಿಕ ಶಾಂತಿಗೆ ಧಕ್ಕೆ ತರುವ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಮುಂಡೂರು ಗ್ರಾಮದ ಕಡ್ಯ ನಿವಾಸಿ, ಕರ್ನಾಟಕ ರಾಜ್ಯ ದಲಿತ ಹಕ್ಕುಗಳ ರಾಜ್ಯ ಸಮಿತಿ ಸದಸ್ಯೆ ಈಶ್ವರಿ ಪದ್ಮುಂಜ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಅವರ ಹೆಸರಿನಲ್ಲಿ ಹಿಂದು- ಮುಸ್ಲಿಂ ವೈಷಮ್ಯ ಬೆಳೆಯುವಂತೆ ಮಾತನಾಡಿದ್ದಾರೆ. ಜತೆಗೆ ಸಂಘರ್ಷಕ್ಕೆ ಪ್ರಚೋದಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು. ಈ ದೂರಿನನ್ವಯ ಸಂಪ್ಯ ಠಾಣೆ ಪೊಲೀಸ್ ಠಾಣೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ದೀಪೋತ್ಸವ ಕಾರ್ಯಕ್ರಮದ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ದ.ಕ. ಜಿಲ್ಲಾ ಎಸ್ಪಿ ಡಾ.ಅರುಣ್ ಕೆ. ತಿಳಿಸಿದ್ದಾರೆ.