

ಮಂಗಳೂರು: ದಶಕದ ಅವಧಿಯಲ್ಲಿ ನಗರ ಪೊಲೀಸ್ ಕಮಿಷನರೇಟ್ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 277 ದಲಿತ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 14 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. ಉಳಿದ 263 ಪ್ರಕರಣಗಳಲ್ಲಿ ಆರೋಪಿಗಳು ಖುಲಾಸೆಯಾಗಿದ್ದಾರೆ. ಪೊಲೀಸ್ ಹಾಗೂ ನ್ಯಾಯಾಂಗ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು ಎಂದು ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭಾನುವಾರ ನಡೆದ ದಲಿತ ಕುಂದು ಕೊರತೆ ಮಾಸಿಕ ಸಭೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡ ಎಂ.ದೇವದಾಸ್ ಅವರು ಈ ವಿಚಾರ ಪ್ರಸ್ತಾಪಿಸಿದರು.
ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 151 ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ, 7 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿಯೂ 119 ಪ್ರಕರಣ ದಾಖಲಾಗಿದ್ದು, 7 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು, 112 ಪ್ರಕರಣಗಳಲ್ಲಿ ಶಿಕ್ಷೆ ಆಗಿಲ್ಲ. ಅಪರಾಧ ಸಾಬೀತಾಗಿ ಶಿಕ್ಷೆಯಾಗುವ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಕಾಯ್ದೆ ಬಗ್ಗೆ ಇರುವ ಭಯ ಇಲ್ಲದೆ ಮತ್ತಷ್ಟು ದೌರ್ಜನ್ಯ ಪ್ರಕರಣಗಳು ನಡೆಯುವ ಸಾಧ್ಯತೆ ಇದೆ ಎಂದವರು ಹೇಳಿದರು.
ಮುಖಂಡ ಎಸ್ .ಪಿ. ಆನಂದ್ ಮಾತನಾಡಿ, ಹಿಂದೆ ಠಾಣಾ ಮಟ್ಟದಲ್ಲಿ ತಿಂಗಳಲ್ಲಿ ಒಂದು ದಿನ ಸಾಕ್ಷಿದಾರರನ್ನು ಕರೆಸಿ ಅವರಿಗೆ ಪೊಲೀಸರು ಧೈರ್ಯ ತುಂಬುತ್ತಿದ್ದರು. ಈಗ ಅದು ಆಗುತ್ತಿಲ್ಲ. ಮುಂದಿನ ದಿನಗಳಲ್ಲಾದರೂ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಮುಖಂಡ ಎಸ್.ಪಿ.ಆನಂದ ಹೇಳಿದರು.
ಡಿಸಿಪಿ ರವಿಶಂಕರ್ ಅವರು ಉತ್ತರಿಸಿ, ದಲಿತ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶೇಷ ಸರ್ಕಾರಿ ಅಭಿಯೋಜಕರು ಕೆಲಸ ಮಾಡುತ್ತಾರೆ. ಪ್ರಕರಣದ ತನಿಖೆ ಎಸಿಪಿ ಮತ್ತು ಅದಕ್ಕಿಂತ ಮೇಲಿನ ಹಂತದ ಅಧಿಕಾರಿಗಳು ನಡೆಸುತ್ತಾರೆ. ಕೆಲವು ಪ್ರಕರಣಗಳಲ್ಲಿ ಸಾಕ್ಷಿದಾರರೇ ಪ್ರತಿಕೂಲ ಸಾಕ್ಷಿ ನುಡಿಯುತ್ತಾರೆ ಎಂದರು.
ಪರಿಶಿಷ್ಟ ಜಾತಿ- ಪಂಗಡದ ಜನರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಸಮುದಾಯದ ಜನರು ಹಾಗೂ ಮುಖಂಡರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕಾರ್ಯಾಗಾರ ನಡೆಸ ಅಗತ್ಯವಿದೆ. ಇದರಿಂದ ನಮ್ಮಲ್ಲಿಯೂ ಒಂದಷ್ಟು ಅರಿವು, ಜಾಗೃತಿ ಮೂಡುತ್ತದೆ ಎಂದು ದೇವದಾಸ್ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಮಿಥುನ್, ಕಾನೂನು ಅರಿವು ಮತ್ತು ಸರ್ಕಾರದಿಂದ ಲಭ್ಯವಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಆಯೋಜಿಸಲು ಈಗಾಗಲೇ ಉದ್ದೇಶೀಶಲಾಗಿದೆ ಎಂದರು.
ಕಿನ್ನಿಗೋಳಿ ಬಸ್ ಕಂಡಕ್ಟರ್ ಒಬ್ಬ ದಲಿತ ಯುವತಿಯನ್ನು ಅತ್ಯಾಚಾರ ಮಾಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಮಹಿಳಾ ಠಾಣೆಗೆ ಹೋದರೆ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್ ಇ) ಠಾಣೆಗೆ ಹೋಗುವಂತೆ ಹೇಳಿದ್ದಾರೆ. ಅಲ್ಲಿಗೆ ಹೋದರೆ ಅಧಿಕಾರಿ ರಜೆಯಲ್ಲಿದ್ದಾರೆ ಎರಡು ದಿನ ಬಿಟ್ಟು ಬನ್ನಿ ಎಂದು ಹೇಳಿದ್ದಾರೆ. ಇದೀಗ ಸಂತ್ರಸ್ತೆಯ ಮನೆಯವರು ಕೇಸ್ ಮಾಡುವುದೇ ಬೇಡ ಎಂದು ಹೇಳುತ್ತಿದ್ದಾರೆ ಆನಂದ್ ತಿಳಿಸಿದರು. ಕೂಡಲೇ ಈ ಬಗ್ಗೆ ಕ್ರಮ ವಹಿಸುವಂತೆ ಠಾಣಾಧಿಕಾರಿಗಳು ಡಿಸಿಪಿ ನಿರ್ದೇಶನ ನೀಡಿದರು.
ದಲಿತರಿಗೆ ಮೀಸಲಾದ ಜಾಗವನ್ನು ಅರಣ್ಯ ಇಲಾಖೆ ಸ್ವಾಧೀನ ಪಡಿಸುತ್ತಿದೆ. ಈ ಬಗ್ಗೆ ಈಗಾಗಲೇ ಅರಣ್ಯ ಅಧಿಕಾರಿಯವರಿಗೆ ಮನವಿ ನೀಡಲಾಗಿದೆ. ಅಂಬೇಡ್ಕರ್ ವೃತ್ತದ ಕಾಮಗಾರಿ ಶೀಘ್ರ ಆರಂಭಿಸಬೇಕು ಎಂದು ಮುಖಂಡ ಚಂದ್ರ ಕುಮಾರ್ ಒತ್ತಾಯಿಸಿದರು.
ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಸ್ಪೃಶ್ಯತೆ ಇನ್ನೂ ಜಾರಿಯಲ್ಲಿದೆ ಎಂದು ಕಳೆದ ಸಭೆಯಲ್ಲಿ ಚರ್ಚೆಯಾಗಿರುವುದು ಸತ್ಯಕ್ಕೆ ದೂರವಾದುದು ಎಂದು ಪಂಚಾಯಿತಿ ಸದಸ್ಯೆಯೊಬ್ಬರು ಸಭೆಯಲ್ಲಿ ಮಾಹಿತಿ ನೀಡಿದರು. ಖಾಸಗಿಯವರ ಬಾವಿಯಿಂದ ನೀರು ಸೇದಬೇಕಾದರೆ ಅವರನ್ನು ಕೇಳಿಯೇ ತೆಗೆಯಬೇಕು. ಆದರೆ ಸರ್ಕಾರಿ ಬಾವಿಯಿಂದ ಎಲ್ಲರೂ ನೀರು ತೆಗೆಯಬಹುದು. ಇಲ್ಲಿ ಅಂತಹ ಯಾವುದೇ ಸಮಸ್ಯೆಯಿಲ್ಲ ಎಂದರು. ರವಿಶಂಕರ್ ಅವರು ಉತ್ತರಿಸಿ, ಈ ಬಗ್ಗೆ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದರು.
ದಕ್ಷಿಣ ಉಪ ವಿಭಾಗದ ಎಸಿಪಿ ವಿಜಯ ಕ್ರಾಂತಿ ಪಾಲನಾ ವರದಿ ಮಂಡಿಸಿದರು. ಉತ್ತರ ಉಪ ವಿಭಾಗದ ಎಸಿಪಿ ಶ್ರೀಕಾಂತ್, ಸಂಚಾರ ವಿಭಾಗದ ಎಸಿಪಿ ನಜ್ಮಾ ಫಾರೂಕಿ, ವಿವಿಧ ಠಾಣಾಧಿಕಾರಿಗಳು ಉಪಸ್ಥಿತರಿದ್ದರು.