ಜಿಲ್ಲೆ

ವಿದೇಶಿ ಪ್ರಜೆಗೆ ಮನೆ ಬಾಡಿಗೆ ನೀಡಿದ್ದ ಮಾಲೀಕನ ವಿರುದ್ಧ ಕೇಸ್

ಬೆಂಗಳೂರು: ಕಾಚರಕನಹಳ್ಳಿ ಅಜ್ಜಮಲ್ಲಪ್ಪ ಲೇಔಟ್​ನಲ್ಲಿ ಮೇ 9ರಂದು ಕೊಲೆಯಾದ ನೈಜೀರಿಯಾ ಪ್ರಜೆ ಜಾನ್ ಸಂಡೆ (30) ಒಬ್ಬ ಡ್ರಗ್ಸ್ ದಂಧೆಕೋರ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಆತನ ವಾಸಕ್ಕೆ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದನ್ನು ಪೊಲೀಸರಿಗೆ ತಿಳಿಸದೆ ಮಾಹಿತಿ ಮುಚ್ಚಿಟ್ಟ ಮನೆ ಮಾಲೀಕನ ವಿರುದ್ಧ ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಮ್ಮನಹಳ್ಳಿ ನಿವಾಸಿ ಆರ್. ಶೇಖರ್ (50) ಮನೆ ಮಾಲೀಕ. ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ ವಿದೇಶಿ ಪ್ರಜೆಗೆ ಹಣದಾಸೆಗಾಗಿ ಮನೆ ಬಾಡಿಗೆಗೆ ನೀಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಶೇಖರ್ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಲದ ಹಣಕ್ಕಾಗಿ ಕೊಲೆ: ಮನೋಜ್ ಎಂಬಾತನೊಂದಿಗೆ ಸ್ನೇಹ ಬೆಳೆಸಿದ್ದ ಜಾನ್, ಆತನಿಂದ ಸಾಲ ಪಡೆದುಕೊಂಡಿದ್ದ. ಸರಿಯಾದ ಸಮಯಕ್ಕೆ ಹಣ ವಾಪಸ್ ಕೊಟ್ಟಿರಲಿಲ್ಲ. ಮನೋಜ್ ಹಣ ಕೇಳಲು ಹೋದಾಗಲೆಲ್ಲ ಮದ್ಯದ ಪಾರ್ಟಿ ಮಾಡಿಸಿ ಕಳುಹಿಸಿದ್ದ. ಇದೇ ರೀತಿ ಮೇ 9ರಂದು ಪಾರ್ಟಿ ಮಾಡುತ್ತಿದ್ದಾಗ ಗಲಾಟೆ ನಡೆದಿತ್ತು. ಮದ್ಯದ ಅಮಲಿನಲ್ಲಿದ್ದ ಜಾನ್ ಚೂರಿಯಿಂದ ಮನೋಜ್ ಹೊಟ್ಟೆಗೆ ಇರಿದಿದ್ದ. ಮನೋಜ್ ಅದೇ ಚೂರಿಯನ್ನು ಕಸಿದು ಜಾನ್​ಗೆ ಇರಿದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಜಾನ್ ಮೃಪಟ್ಟಿದ್ದ.

ಪೊಲೀಸರಿಗೆ ಮಾಹಿತಿ ನೀಡಿಲ್ಲ: ಜಾನ್ ಸಂಡೆ 3 ವರ್ಷದ ಹಿಂದೆ ಶೈಕ್ಷಣಿಕ ವೀಸಾದಡಿ ಭಾರತಕ್ಕೆ ಬಂದು ನಗರದಲ್ಲಿ ವಾಸಿಸುತ್ತಿದ್ದ. 6 ತಿಂಗಳಿಂದ ಕಾಚಕರನಹಳ್ಳಿಯ ಅಜ್ಜಮಲ್ಲಪ್ಪ ಲೇಔಟ್​ನಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ. ಮನೆ ಮಾಲೀಕ ಶೇಖರ್, 2 ಲಕ್ಷ ರೂ. ಮುಂಗಡ ಹಾಗೂ ಮಾಸಿಕ ಬಾಡಿಗೆ 13

ಸಾವಿರ ರೂ.ಗಳಿಗೆ ಕರಾರು ಮಾಡಿಕೊಂಡಿದ್ದ. ಆದರೆ, ಯಾವುದೇ ಅಗತ್ಯ ದಾಖಲೆ ಪಡೆದುಕೊಂಡಿಲ್ಲ. ವಿದೇಶಿ ಪ್ರಜೆಗೆ ಮನೆ ಬಾಡಿಗೆ ನೀಡಿರುವ ಮಾಹಿತಿಯನ್ನು ಸ್ಥಳೀಯ ಪೊಲೀಸರಿಗೆ ಅಥವಾ ಎಫ್​ಆರ್​ಆರ್​ಒ (ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ)ಗೆ ನೀಡಿಲ್ಲ.

5 ಕೇಸ್ ಇತ್ತು

ಜಾನ್ ಸಂಡೆ ನಗರದ ವಿವಿಧೆಡೆ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ. ಆತನ ವಿರುದ್ಧ ಇಂದಿರಾನಗರ, ಕೆ.ಆರ್. ಪುರ ಸೇರಿ ಮುಂತಾದ ಠಾಣೆಗಳಲ್ಲಿ 5 ಕೇಸ್ ದಾಖಲಾಗಿವೆ. ಸಿಸಿಬಿ ಪೊಲೀಸರ ಕೈಗೂ ಒಮ್ಮೆ ಸಿಕ್ಕಿಬಿದ್ದಿದ್ದ. ಆದಾಗ್ಯೂ, ಆತನ ಪೂರ್ವಪರ ಪರಿಶೀಲಿಸದೆ ಮನೆಯನ್ನು ಶೇಖರ್ ಬಾಡಿಗೆಗೆ ಕೊಟ್ಟಿದ್ದ. ಜಾನ್ ಒಪ್ಪಂದಕ್ಕಿಂತ ಹೆಚ್ಚಿನ ಹಣ ನೀಡುತ್ತಿದ್ದ. ಮಾಸಿಕ ಬಾಡಿಗೆ 10 ಸಾವಿರ ರೂ. ಇರುವ ಮನೆಗೆ 20 ರಿಂದ 30 ಸಾವಿರ ರೂ. ಬಾಡಿಗೆ ಸಿಗುತ್ತಿತ್ತು. ಈ ಹಿನ್ನೆಲೆಯಲ್ಲಿ ಆತನ ಅಕ್ರಮ ಚಟುವಟಿಕೆಗಳನ್ನು ಮುಚ್ಚಿಟ್ಟು, ಕೃತ್ಯಕ್ಕೆ ಪರೋಕ್ಷವಾಗಿ ಸಹಕರಿಸಿರುವುದು ಕಂಡುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.