ಜಿಲ್ಲೆ

ಸುಬ್ರಹ್ಮಣ್ಯದಲ್ಲಿ ದಾಸರ ಪದಗಳ ಗಾಯನ : ಪ್ರತಿಭಾನ್ವಿತ ಕಲಾವಿದರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ

ಸೌಮ್ಯ ಆರ್

ಸುಬ್ರಹ್ಮಣ್ಯ: ಶ್ರೀ ಸಂಪುಟ ನರಸಿಂಹಸ್ವಾಮಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಶ್ರೀ ಮಠದ ಅನಿರುದ್ಧತೀರ್ಥ ವೇದಿಕೆಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ವೈಭವದಲ್ಲಿ ಬುಧವಾರ ಸೌರಭ ಸರ್ವಜ್ಞ ಕಡೇಶಿವಾಲಯ, ಸ್ಥಳೀಯ ಪ್ರತಿಭಾನ್ವಿತ ಕಲಾವಿದರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ದಾಸರ ಪದಗಳ ಗಾಯನ ನಡೆಯಿತು.

ವಯಲೀನ್‌ನಲ್ಲಿ ವಿದುಷಿ ಧನಶ್ರೀ ಶಬರಾಯ ಮಂಗಳೂರು, ಮೃದಂಗಂನಲ್ಲಿ ವಿದ್ವಾನ್ ಶ್ಯಾಮ್ ಭಟ್ ಸುಳ್ಯ ಸಹಕಾರ ನೀಡಿದರು. ರಾಮಾಯಣದ ನೀತಿ ಪಾಠಗಳ ಬಗ್ಗೆ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಪ್ರವಚನ ನೀಡಿದರು.

ಮಂಗಳವಾರ ಧಾರ್ಮಿಕ ನಂಬಿಕೆಯಲ್ಲಿ ನಾಗ ದೇವರಿಗೆ ಇರುವ ಮಹತ್ವದ ಬಗ್ಗೆ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಪ್ರವಚನ ನೀಡಿದರು. ವಿದ್ವಾನ್ ಕಾಂಚನ ಈಶ್ವರ ಭಟ್ ಅವರ ಶಿಷ್ಯರಾದ ವೆಂಕಟಯಶಸ್ವಿ, ವಿಜೇತ ಸುಬ್ರಹ್ಮಣ್ಯ ಕಬೆಕ್ಕೋಡು ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನೆರವೇರಿತು. ಹಿಮ್ಮೇಳದಲ್ಲಿ ವಿದ್ವಾನ್ ವೇಣುಗೋಪಾಲ ಶ್ಯಾನುಭೋಗ, ವಿದ್ವಾನ್ ಡಾ.ಅಕ್ಷಯ ನಾರಾಯಣ ಕಾಂಚನ ಹಿಮ್ಮೇಳ ಸಹಕಾರ ನೀಡಿದರು. ಸೋಮವಾರ ಶ್ರೀಮದ್ ಭಾಗವತದ ಆಯ್ದ ಪ್ರಸಂಗಗಳು ಎಂಬ ವಿಷಯದ ಬಗ್ಗೆ ಸ್ವಾಮೀಜಿ ಪ್ರವಚನ ನೀಡಿದರು. ಕೀರ್ತನೆಕಾರ ವೈ.ಅನಂತಪದ್ಮನಾಭ ಅವರಿಂದ ಹರಿಕಥಾ ಸತ್ಸಂಗ ನೆರವೇರಿತು. ಅವರಿಗೆ ಪ್ರದೀಪ್ ಉಪಾಧ್ಯಾಯ ಕಾರ್ಕಳ ತಬಲದಲ್ಲಿ ಸಹಕಾರ ನೀಡಿದರು. ಶ್ರೀ ಮಠದ ದಿವಾನ ಸುದರ್ಶನ ಜೋಯಿಸ, ಸಂಯೋಜಕ ಕಲಾವಿದ ಕೆ.ಯಜ್ಞೇಶ್ ಆಚಾರ್ ಮೊದಲಾದವರಿದ್ದರು.