ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ(ಸೋಮವಾರ) ಸಂಜೆ ಚಲಿಸುತ್ತಿದ್ದ ಕಾರು ರಸ್ತೆಯಲ್ಲೇ ಹೊತ್ತಿ ಉರಿದ್ದಿತ್ತು. ಇದರ ಬೆನ್ನಲ್ಲೇ ಇಂದು ಸಂಜೆ ಮತ್ತೊಂದು ವಾಹನ ರಸ್ತೆಯಲ್ಲೇ ಬೆಂಕಿಗೆ ಆಹುತಿಯಾಗಿದೆ.
ಕಡಬ ತಾಲೂಕಿನ ಮಣ್ಣಗುಂಡಿ ಎಂಬಲ್ಲಿ ಮಂಗಳವಾರ ಸಂಜೆ ಶಿರಾಡಿಯಿಂದ ನೆಲ್ಯಾಡಿಗೆ ಬರುತ್ತಿದ್ದ ಪ್ಯಾಸೆಂಜರ್ ವಾಹನ ಸಂಪೂರ್ಣ ಭಸ್ಮವಾಗಿದ್ದು, ಚಾಲಕ ಸೇರಿ ಮೂವರು ಅಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿರಿ ಮುಂಗುಸಿ ಸೆರೆಯಾಗಬೇಕಿದ್ದ ಬೋನಲ್ಲಿ ಚಿರತೆ ಲಾಕ್ ಆಗಿದ್ದೇ ರೋಚಕ!
ಚಲಿಸುತ್ತಿದ್ದ ವಾಹನದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ವಾಹನ ನಿಲ್ಲಿಸಿದ ಚಾಲಕ ಮತ್ತು ಪ್ರಯಾಣಿಕರಿಬ್ಬರು ಕೂಡಲೇ ಕೆಳಗಿಳಿದಿದ್ದಾರೆ. ಕ್ಷಣಾರ್ಧದಲ್ಲೇ ಧಗಧಗಿಸಿ ಉರಿದ ಕಾರು, ಸುಟ್ಟು ಕರಕಲಾಯಿತು. ಬ್ಯಾಟರಿ ಭಾಗದಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಸೋಮವಾರ ಸಂಜೆ ಕೊಲ್ನಾಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಹತ್ತಿಕೊಂಡು ಅದೂ ಕೂಡ ಸಂಪೂರ್ಣ ಭಸ್ಮವಾಗಿತ್ತು. ಕಾರ್ನಾಡು ನಿವಾಸಿ ಫಯಾಝ್ ಅವರು ಕಾರನ್ನು ಪಣಂಬೂರಿನಿಂದ ಮೂಲ್ಕಿಗೆ ಚಲಾಯಿಸಿಕೊಂಡು ಬರುತ್ತಿದ್ದಾಗ ಕಾರಿನ ಬಾನೆಟ್ ಒಳಗಡೆ ಹತ್ತಿಕೊಂಡಿದ್ದ ಬೆಂಕಿ ಇಡೀ ಕಾರನ್ನೇ ಆಹುತಿ ಪಡೆದಿತ್ತು.