ಜಿಲ್ಲೆ

ಕಾರು-ಬೈಕ್ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಸಾವು, ಕಾರಲ್ಲಿದ್ದವರು ಪರಾರಿ..

ಧಾರವಾಡ: ಕಾರೊಂದು ಬೈಕ್​ಗೆ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್​ನಲ್ಲಿದ್ದ ಮೂವರೂ ಸ್ಥಳದಲ್ಲೇ ಸಾವಿಗೀಡಾಗಿದ್ದು, ಕಾರಿನಲ್ಲಿದ್ದವರು ಕಾರು ಬಿಟ್ಟು ಕಾಲ್ಕಿತ್ತಿದ್ದಾರೆ. ಧಾರವಾಡದಲ್ಲಿ ಈ ಅಪಘಾತ ಸಂಭವಿಸಿದೆ.

ಧಾರವಾಡದ ರಾಷ್ಟ್ರೀಯ ಹೆದ್ದಾರಿ 4ರಲ್ಲಿನ ವೆಂಕಟಾಪುರ ಬಳಿ ಕಾರು-ಬೈಕ್ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಬೈಕ್​ನಲ್ಲಿದ್ದ ಮೂವರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬೊಗೂರ ಗ್ರಾಮದ ಸುಶೀಲವ್ವ ಹರಿಜನ, ಕಲ್ಲವ್ವ ಹರಿಜನ ಮತ್ತು ತಿಗಡೊಳ್ಳಿ ನಿವಾಸಿ ರಾಜು ಸಾವಿಗೀಡಾದವರು.

ಇವರು ಧಾರವಾಡಕ್ಕೆ ನೇರಳೆಹಣ್ಣು ಮಾರಲು ಹೋಗಿದ್ದರು. ಮೂವರು ಸ್ಥಳದಲ್ಲೇ ಸಾವಿಗೀಡಾದ್ದನ್ನು ನೋಡಿ ದಿಗಿಲುಗೊಂಡು ಕಾರಿನಲ್ಲಿದ್ದವರು ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ. ಗರಗ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.