ಕೊಕಟನೂರ: ಅಂತಾರಾಜ್ಯ ಮಾದಕ ದ್ರವ್ಯ ಜಾಲ ಬೇಧಿಸಿರುವ ಬೆಳಗಾವಿ ಜಿಲ್ಲಾ ಅಪರಾಧ ವಿಭಾಗದ ಪೊಲೀಸರು, ಶುಕ್ರವಾರ ಓರ್ವ ಮಹಿಳೆ ಸೇರಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರಿಂದ 4 ಲಕ್ಷ ರೂ. ಮೌಲ್ಯದ 2 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರದ ಜತ್ತ ತಾಲೂಕಿನ ಬಿಳ್ಳೂರ ಗ್ರಾಮದ ರಾವಸಾಹೇಬ್ ಅಣ್ಣಪ್ಪ ನಂದಿವಾಲೆ, ಸೊಲ್ಲಾಪುರ ಜಿಲ್ಲೆಯ ಮೊಹೊಳ ತಾಲೂಕಿನ ಶೇಟಪಾಳ ಗ್ರಾಮದ ಸಂಗೀತಾ ದತ್ತಾತ್ರೇಯ ವಾಗಜ, ಪಂಢರಪುರ ತಾಲೂಕಿನ ಅಡಿವ ಗ್ರಾಮದ ವಿಲಾಸ ಪಾಂಡುರಂಗ ಘಾಡಗೆ ಬಂಧಿತರು.
ಬಂಧಿತ ರಾವಸಾಹೇಬ್ ನಂದಿವಾಲೆ ಎಂಬಾತ ಮಹಾರಾಷ್ಟ್ರದ ಪಂಢರಪುರ ಕಡೆಯಿಂದ ಬೈಕ್ ಮೇಲೆ ಅನಂತಪುರ ಮಾರ್ಗವಾಗಿ ಅಥಣಿ ಕಡೆಗೆ ಗಾಂಜಾ ಸಾಗಣೆ ಮಾಡುತ್ತಿದ್ದಾರೆ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಇನ್ಸ್‌ಪೆಕ್ಟರ್ ವೀರೇಶ ದೊಡ್ಡಮನಿ ನೇತೃತ್ವದ ತಂಡ ದಾಳಿ ನಡೆಸಿದಾಗ 2 ಕೆ.ಜಿ. ಗಾಂಜಾ ಪತ್ತೆಯಾಗಿದೆ. ಪೊಲೀಸರು ಆತನ ಬಾಯಿ ಬಿಡಿಸಿ, ಪಂಢರಪುರಕ್ಕೆ ತೆರಳಿ ಓರ್ವ ಮಹಿಳೆ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. ಒಂದು ಕಾರ್, ಬೈಕ್ ವಶಕ್ಕೆ ಪಡೆದಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಎಸ್‌ಐ ಅಶೋಕ ಭಜಂತ್ರಿ, ಬಿ.ಎಸ್. ಚಿನ್ನಕುಪ್ಪಿ, ಯಲ್ಲಪ್ಪ ಸಪ್ತಸಾಗರ, ಶಿವಶಂಕರ ಬೆವನೂರ, ನಾಗಪ್ಪ ಗುಡೆಣ್ಣವರ, ಮೋಹನ ಕಾಂಬಳೆ, ಸುನೀಲ ಕಾಂಬಳೆ, ಮಹಿಳಾ ಪೇದೆ ಜಿ.ಎ. ಗುರಮಠ ಪಾಲ್ಗೊಂಡಿದ್ದರು.