ಜಿಲ್ಲೆ

ಕಬ್ಬಿನ ಗದ್ದೆಯಲ್ಲಿ ಗಾಂಜಾ ಗಿಡಗಳು!

arunakunigal

ಬೀದರ್: ಡ್ರಗ್ಸ್​ ಮಾಫಿಯಾವನ್ನು ಬುಡಸಮೇತ ಕಿತ್ತುಹಾಕಲು ಸಜ್ಜಾಗಿರುವ ಪೊಲೀಸರು ರಾಜ್ಯಾದ್ಯಂತ ಭರ್ಜರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ವಡೇರಹಳ್ಳಿ ಗ್ರಾಮದಲ್ಲಿ ಬರೋಬ್ಬರಿ ನಾಲ್ಕೂವರೆ ಎಕರೆ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯನ್ನು ಪತ್ತೆ ಹಚ್ಚಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

ಇದೀಗ ಹುಮನಾಬಾದ್ ತಾಲೂಕಿನಲ್ಲಿ ಕಬ್ಬಿನ ಗದ್ದೆಯಲ್ಲಿ ಗಾಂಜಾ ಬೆಳೆದ ವ್ಯಕ್ತಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ.

ಬೀದರ್​ ಜಿಲ್ಲೆಯ ಹುಮನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದ ಗಬ್ಬಿನ ಗದ್ದೆಯಲ್ಲಿ ವ್ಯಕ್ತಿಯೊಬ್ಬ ಅಕ್ರಮವಾಗಿ ಗಾಂಜಾ ಬೆಳೆದಿರುವುದು ಪತ್ತೆಯಾಗಿದೆ. ಗುಬಲಗುಂಡಿ ಗ್ರಾಮಕ್ಕೆ ಭೇಟಿ ನೀಡಿದ ಪೊಲೀಸರು ಮಾಣಿಕ ಗುಂಡಪ್ಪ ಜ್ಯಾಂತೆ ಎಂಬಾತನ ಕಬ್ಬಿನ ಗದ್ದೆಯನ್ನು ಪರಿಶೀಲಿಸಿದಾಗ ಅಲ್ಲಿ ಗಾಂಜಾ ಗಿಡಗಳು ಪತ್ತೆಯಾಗಿವೆ. ಆರೋಪಿ ಮಾಣಿಕ ಗುಂಡಪ್ಪ ಜ್ಯಾಂತೆಯನ್ನು ಬಂಧಿಸಿದ ಪೊಲೀಸರು 145 ಕೆ.ಜಿ. ತೂಕದಷ್ಟು ಗಾಂಜಾ ಗಿಡಗಳನ್ನು ಜಪ್ತಿ ಮಾಡಿದ್ದಾರೆ. ಈ ಕುರಿತು ಹಳ್ಳಿಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನಕ್ಕೆ ಮೂರ್ನಾಲ್ಕು ಕಡೆ ಇಂತಹ ಪ್ರಕರಣಗಳು ಪತ್ತೆಯಾಗುತ್ತಿದ್ದು, ಬಗೆದಷ್ಟೂ ಆಳ ಎಂಬಂತಿದೆ ಡ್ರಗ್ಸ್​ ಜಾಲ.