ಜಿಲ್ಲೆ

ಮಗುವಿನ ಗಂಟಲಲ್ಲಿ ಸಿಲುಕಿದ ಕ್ಯಾಂಡಿ: ಮಂಗಳೂರು ವೈದ್ಯರ ನೆರವಿನಿಂದ ಉಳಿಯಿತು ಜೀವ! Mangaluru doctors

Mangaluru Doctors : ಕ್ಯಾಂಡಿ ಗಂಟಲಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮಗುವಿನ ಜೀವವನ್ನ ಕಕ್ಕಿಂಜೆ ಶ್ರೀಕೃಷ್ಣ ಆಸ್ಪತ್ರೆಯ ಕೆಎಂಸಿ ತುರ್ತುನಿಗಾ ಘಟಕದ ವೈದ್ಯರು ರಕ್ಷಿಸಿದ್ದಾರೆ.

2 ವರ್ಷದ ಮಗು ಕ್ಯಾಂಡಿ ತಿನ್ನುವಾಗ ಗಂಟಲಲ್ಲಿ ಸಿಲುಕಿ, ಉಸಿರಾಟದ ಸಮಸ್ಯೆಗೆ ಸಿಲುಕಿತ್ತು. ಮಗುವಿನ ಪಾಲಕರು ಘಟನೆ ನಡೆದ 10 ರಿಂದ 15 ನಿಮಿಷದಲ್ಲಿ ಆಸ್ಪತ್ರೆಗೆ ಕರೆತಂದರು. ತಕ್ಷಣ ಕಾರ್ಯಪ್ರವೃತ್ತರಾದ ವೈದ್ಯರ ತಂಡ ಮಗುವಿನ ಉಸಿರಾಟಕ್ಕೆ ತಡೆಯಾಗಿದ್ದ ಕ್ಯಾಂಡಿಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಆಸ್ಪತ್ರೆಗೆ ಮಗುವನ್ನು ಕರೆತಂದಾಗ ಮಗು ಬಹಳ ನಿಶ್ಶಕ್ತಗೊಂಡಿದ್ದು, ಆಮ್ಲಜನಕ ಪ್ರಮಾಣವೂ ಅಪಾಯಮಟ್ಟದಲ್ಲಿ ಕಡಿಮೆಯಾಗಿತ್ತು. ಉಸಿರಾಟ ನಡೆಸಲು ಕೂಡ ಕಷ್ಟವಾಗುತ್ತಿತ್ತು. ತಕ್ಷಣ ಆಸ್ಪತ್ರೆಯ ತಜ್ಞ ವೈದ್ಯರು ಪರೀಕ್ಷೆ ನಡೆಸಿ ‘ವಿಶೇಷವಾದ ಚೋಕಿಂಗ್‌ ರೆಸ್ಕ್ಯೂ ವಿಧಾನವನ್ನು’ ಕೈಗೊಂಡರು. ಆದರೂ ಮಗುವಿನ ಸ್ಥಿತಿ ಸುಧಾರಿಸದಿದ್ದಾಗ ಕ್ರಮಬದ್ಧವಾಗಿ ಬೆನ್ನಿಗೆ ಮತ್ತು ಹೊಟ್ಟೆಯ ಭಾಗದಲ್ಲಿ ಒತ್ತಡ ಹಾಕುವ ಮೂಲಕ ಸಿಲುಕಿದ್ದ ಕ್ಯಾಂಡಿಯನ್ನು ವಾಂತಿ ಮಾಡಿಸಿ ಹೊರ ತೆಗೆಯಲಾಗಿದೆ. ಆ ಬಳಿಕ ಮಗುವಿನ ಉಸಿರಾಟದಲ್ಲಿ ಸುಗಮವಾಯಿತು. ಸದ್ಯ ಮಗುವನಗನು ನಿಗಾ ಘಟಕದಲ್ಲಿ ಇರಿಸಿ ಆರೈಕೆ ಮಾಡಲಾಗಿದೆ. ಜತೆಗೆ ಎಕ್ಸ್‌ ರೇ ಮೂಲಕ ಮತ್ತೆ ಯಾವುದೇ ರೀತಿಯ ಸಮಸ್ಯೆ ಇದೆಯೇ ಎಂದು ಕೂಡ ಪರೀಕ್ಷಿಸಲಾಗಿದೆ ಎಂದು ತುರ್ತುಚಿಕಿತ್ಸಾ ಘಟಕ ಕ್ಲಸ್ಟರ್‌ ಮುಖ್ಯಸ್ಥರಾದ ಡಾ. ಜೀಧು ರಾಧಾಕೃಷ್ಣನ್‌ ಹೇಳಿದರು.

ಶ್ರೀ ಕೃಷ್ಣ ಆಸ್ಪತ್ರೆಯಲ್ಲಿರುವ ಕೆಎಂಸಿ ಆಸ್ಪತ್ರೆ ತುರ್ತು ಸೇವಾ ಘಟಕ ಸುತ್ತಮುತ್ತಲಿನ ಪ್ರದೇಶದ ಜನರಿಗೆ ಉತ್ತಮ ಸೇವೆಯನ್ನ ನೀಡುತ್ತಿದೆ. ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಕೆಎಂಸಿ ಆಸ್ಪತ್ರೆ ಕಕ್ಕಿಂಜೆ, ಚಾರ್ಮಾಡಿ, ನೆರಿಯಾ, ಗಂಡಿಬಾಗಿಲು, ಚಿಬಿದ್ರೆ, ಸೋಮನ ದಡ್ಕ, ಕಾರ್ಯತಡ್ಕ, ಮುಂಡಾಜೆ, ಅರಸಿನಮಕ್ಕಿ, ಶಿಶಿಲ, ದಿಡುಪೆಭಾಗದಲ್ಲಿ ಕಾರ್ಡಿಯಾಕ್‌ ಸಮಸ್ಯೆ, ನರ ಸಂಬಂಧಿ ಸಮಸ್ಯೆ, ಸ್ಟ್ರೋಕ್‌, ಹಾವು ಕಡಿತ, ಆರ್‌ಟಿಎ, ಟ್ರೋಮಾ, ದೇಹದಲ್ಲಿ ಸಿಲುಕಿದ ಅನಾರೋಗ್ಯಕರ ವಸ್ತುಗಳನ್ನು ಹೊರತೆಗುವಲ್ಲಿ ಜತೆಗೆ ಇನ್ನೀತರ ಆರೋಗ್ಯ ಸೇವೆ ನೀಡಲು ಶ್ರೀ ಕೃಷ್ಣ ಆಸ್ಪತ್ರೆಯ ಬಲ ಹೆಚ್ಚಿಸಿದೆ ಎಂದು ಡಾ. ಮುರಳಿ ಕೃಷ್ಣ ಇರ್ವತ್ರಾಯ ಅವರು ತಿಳಿಸಿದರು.

ಉಸಿರುಗಟ್ಟುವುದು ಅಥವಾ ಚೋಕಿಂಗ್‌ ಎಂದು ಕರೆಯಲ್ಪಡುವ ಸಮಸ್ಯೆ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ, ದುರಾದೃಷ್ಟವಶಾತ್‌ ನಗರ ಪ್ರದೇಶಗಳಲ್ಲೂ ಇಂತಹ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಿಲ್ಲ. ಕಕ್ಕಿಂಜೆಯಲ್ಲಿ ನಡೆದ ಈ ಪ್ರಕರಣ ನಮ್ಮ ವೈದ್ಯರ ತುರ್ತು ಆರೈಕೆ, ಚಿಕಿತ್ಸೆ ಕೈಗೊಳ್ಳುವಲ್ಲಿನ ತಜ್ಞರ ಬದ್ದತೆ ಹಾಗೂ ಪ್ರಕರಣ ನಿರ್ವಹಿಸಿದ ಕೌಶಲ್ಯವನ್ನು ಎತ್ತಿಹಿಡಿಯುತ್ತದೆ. ಇದರಿಂದ ಇಂದು ಒಂದು ಮಗುವಿನ ಜೀವವನ್ನು ರಕ್ಷಿಸಲಾಗಿದೆ ಎಂದು ಕೆಎಂಸಿ ಆಸ್ಪತ್ರೆ ಮಂಗಳೂರಿನ ಪ್ರಾದೇಶಿಕ ಕಾರ್ಯನಿರ್ವಹಣಾಧಿಕಾರಿ ಸಾಘಿರ್‌ ಸಿದ್ದಿಕಿ ತಿಳಿಸಿದರು.

ವೈದ್ಯರ ತುರ್ತು ಆರೈಕೆ ಹಾಗೂ ಸಿಬ್ಬಂದಿಗಳ ನೆರವಿಗೆ ನಾವು ಸದಾ ಋಣಿಯಾಗಿದ್ದೇವೆ. ನಾವು ತುಂಬಾ ಭಯಗೊಂಡಿದ್ದೆವು. ಆದರೆ, ವೈದ್ಯರು ನಮ್ಮ ಮಗುವಿನ ಜೀವ ರಕ್ಷಿಸಿದ್ದಾರೆ ಎಂದು ಮಗುವಿನ ಪೋಷಕರು ಆಸ್ಪತ್ರೆಗೆ ಧನ್ಯವಾದ ತಿಳಿಸಿದರು.