ಕುಂದಾಪುರ: ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಜಾತಿಗಣತಿ ಪಟ್ಟಿಯಲ್ಲಿ 27 ಉಪಜಾತಿಗಳನ್ನು ಮತ್ತು 5 ಲಕ್ಷಕ್ಕೂ ಮಿಕ್ಕಿ ಜನಸಂಖ್ಯೆ ಹೊಂದಿರುವ ಜೋಗಿ ಸಮಾಜದ ಸಂಖ್ಯೆಯನ್ನು 337 ಎಂದು ತೋರಿಸಲಾಗಿದೆ. ಇದರ ವಿರುದ್ಧ ತೀವ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕುಂದಾಪುರ ಜೋಗಿ ಸಮಾಜ ಸೇವಾ ಸಂಘ ಅಧ್ಯಕ್ಷ ರಮೇಶ್ ಎಚ್.ಎಸ್. ಹೇಳಿದರು.
ಕುಂದಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 50-60 ಸಾವಿರ ಜೋಗಿ ಸಮುದಾಯದವರಿದ್ದಾರೆ. ಕುಂದಾಪುರ ತಾಲೂಕಿನಲ್ಲೇ 15 ಸಾವಿರಕ್ಕೂ ಹೆಚ್ಚು ಮಂದಿ ಜೋಗಿ ಸಮುದಾಯದವರಿದ್ದು, ಜಾತಿ ಗಣತಿಯಲ್ಲಿ ನಮ್ಮನ್ನು ಪರಿಗಣಿಸದೆ ದೊಡ್ಡ ದೋಷ ಮಾಡಲಾಗಿದೆ. ಇದರಿಂದ ಸರ್ಕಾರದ ಯಾವುದೇ ಸೌಲಭ್ಯ ಪಡೆಯಲು ಕಷ್ಟವಾಗುತ್ತದೆ. ಸರ್ಕಾರ ಈ ತಪ್ಪನ್ನು ಸರಿಪಡಿಸಬೇಕು, ಇಂಥ ಅವೈಜ್ಞಾನಿಕ ಜಾತಿ ಗಣತಿ ವರದಿ ರದ್ದುಪಡಿಸಿ, ಮತ್ತೊಮ್ಮೆ ಹೊಸ ಜಾತಿ ಗಣತಿ ವರದಿ ಸಿದ್ಧಪಡಿಸಬೇಕು ಎಂದರು.
ಬೆಂಗಳೂರು ನಾಥ ಪಂಥ ಜೋಗಿ ಮಹಾಸಭಾ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಇತ್ತೀಚೆಗೆ ಸರ್ಕಾರಕ್ಕೆ ಸಲ್ಲಿಸಿದ ಜಾತಿ ಗಣತಿ ವರದಿ ನೋಡಿ ಜೋಗಿ ಸಮಾಜಕ್ಕೆ ಆಘಾತವಾಗಿದೆ. 1931ರ ಜಾತಿ ಗಣತಿಯಲ್ಲಿ 14 ಸಾವಿರದಷ್ಟಿದ್ದ ಜೋಗಿ ಸಮುದಾಯವರ ಸಂಖ್ಯೆಯನ್ನು ಕೇವಲ 337 ಎಂದು ತೋರಿಸಿರುವುದು ವಿಪರ್ಯಾಸ. ಮುಂದಿನ ದಿನಗಳಲ್ಲಿ ಜೋಗಿ ಸಮಾಜ ಒಟ್ಟಾಗಿ ಪ್ರತಿಭಟಿಸುತ್ತದೆ ಎಂದರು.
ಚಿತ್ರದುರ್ಗ ಜಿಲ್ಲೆ ಜೋಗಿ ಸಮಾಜ ಅಧ್ಯಕ್ಷ ಡಾ.ಜಗದೀಶ, ಕುಂದಾಪುರ ಜೋಗಿ ಸಮಾಜ ಗೌರವಾಧ್ಯಕ್ಷ ಪಾಂಡುರಂಗ ಜೋಗಿ, ರಾಜಶೇಖರ ಜೋಗಿ ಬೆಂಗಳೂರು, ಶೇಖರ ಬಳೆಗಾರ, ಸತ್ಯನಾರಾಯಣ ಜೋಗಿ, ಚಂದ್ರ ಜೋಗಿ ಶಾನ್ಕಟ್ಟು, ಅಮೃತ ಜೋಗಿ ಬೆಂಗಳೂರು ಉಪಸ್ಥಿತರಿದ್ದರು.