ಕುಸಿದು ವರ್ಷವಾದರೂ ದುರಸ್ತಿ ಕಾಣದ ಬಾವಿ

gan-1
Published on

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ

ಗ್ರಾಮಕ್ಕೆ ನೀರು ಪೂರೈಸುತ್ತಿದ್ದ ಬಾವಿಯೊಂದು ಕುಸಿದು ವರ್ಷ ಕಳೆದರೂ ಅನುದಾನ ಕೊರತೆಯಿಂದ ದುರಸ್ತಿ ಮಾಡದೇ ಸ್ಥಳೀಯಾಡಳಿತ ಕಣ್ಮುಚ್ಚಿ ಕುಳಿತಿದೆ. ತ್ರಾಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊವಾಡಿ ಪರಿಸರದ ಎಸ್‌ಸಿ ಕಾಲೋನಿ ಸೇರಿದಂತೆ ನೂರಾರು ಕುಟುಂಬಗಳಿಗೆ ನೀರುಣಿಸುತ್ತಿದ್ದ ಬಾವಿ ಕಳೆದ ಮಳೆಗಾಲದಲ್ಲಿ ಕುಸಿದು ಬಿದ್ದಿದೆ. ಬಾವಿ ಕುಸಿದ ಪರಿಣಾಮ ಮೊವಾಡಿ ಭಾಗದ ಜನರಿಗೆ ದಿನ ಬಿಟ್ಟು ದಿನ ಬೋರ್‌ವೆಲ್ ನೀರು ಪೂರೈಸಲಾಗುತ್ತಿದೆ. ಇಲ್ಲಿನ ಕೆಲವು ಪ್ರದೇಶಗಳಿಗೆ ನೀರು ಬಾರದ ಕಾರಣ, ಗ್ರಾಮಸ್ಥರು ಪ್ರತಿನಿತ್ಯ 500 ರೂ. ಕೊಟ್ಟು ಟ್ಯಾಂಕರ್‌ನಿಂದ ನೀರು ತರಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. 2013-14ನೇ ಸಾಲಿನಲ್ಲಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಇಲ್ಲಿ ಬಾವಿ ನಿರ್ಮಿಸಲಾಗಿತ್ತು. ಮೊವಾಡಿ ಪರಿಸರದ ಎಸ್‌ಸಿ ಕಾಲೋನಿ ಸೇರಿದಂತೆ ಈ ಭಾಗದ ನೂರಾರು ಮನೆಗಳಿಗೆ ಈ ಬಾವಿಯಿಂದಲೇ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿತ್ತು. ಹೀಗಾಗಿ ನೀರಿನ ಸಮಸ್ಯೆ ಉದ್ಭವವಾಗಿರಲಿಲ್ಲ. ಕಳೆದ ವರ್ಷ ಬಾವಿ ಕುಸಿದು ಬಿದ್ದಿರುವುದರಿಂದ ಗ್ರಾಮದಲ್ಲಿ ನೀರಿಗೆ ಸಮಸ್ಯೆ ಎದುರಾಗಿದೆ.

ಅನುದಾನ ಕೊರತೆ

ಬಾವಿ ದುರಸ್ತಿ ಮಾಡದ ಕಾರಣ ಅದೇ ಪರಿಸರದಲ್ಲಿ ಹೊಸ ಬಾವಿ ನಿರ್ಮಿಸಲು ಸ್ಥಳೀಯಾಡಳಿತ ಯೋಜನೆ ರೂಪಿಸಿತು. ಹೊಸ ಬಾವಿ ನಿರ್ಮಾಣಕ್ಕೆ ಸುಮಾರು 15 ಲಕ್ಷ ರೂ. ಅನುದಾನ ಬೇಕಾಗಿದ್ದು, ಗ್ರಾಪಂ.ನ ಒಟ್ಟು ಆದಾಯ 15 ಲಕ್ಷ ರೂ. ಇರುವಾಗ ಬಾವಿ ನಿರ್ಮಿಸಲು ಅನುದಾನದ ಕೊರತೆ ಎದುರಾಯಿತು. ಹೀಗಾಗಿ ತೆರೆದ ಬಾವಿಗೆ ಅನುದಾನ ಮಂಜೂರು ಮಾಡುವಂತೆ ತ್ರಾಸಿ ಗ್ರಾಮ ಪಂಚಾಯಿತಿ ಆರೇಳು ತಿಂಗಳಿನಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಪತ್ರ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದು, ಶಾಸಕರ ನೇತೃತ್ವದ ಟಾಸ್ಕ್‌ಪೋರ್ಸ್ ಸಮಿತಿ ಸಭೆಯಲ್ಲೂ ಈ ವಿಚಾರ ಪ್ರಸ್ತಾಪಗೊಂಡಿತ್ತು. ಆದರೆ ಈವರೆಗೆ ಹೊಸ ತೆರೆದ ಬಾವಿ ನಿರ್ಮಾಣಕ್ಕಾಗಲಿ, ಕುಸಿದು ಬಿದ್ದ ಬಾವಿ ದುರಸ್ತಿಗಾಗಲಿ ಯಾವುದೇ ಅನುದಾನ ಮಂಜೂರಾಗಿಲ್ಲ.

ಸ್ಥಳೀಯರ ಮನವಿ

ಕುಸಿದ ಬಾವಿ ದುರಸ್ತಿ ಪಡಿಸಲು ಸಾಧ್ಯವಾಗದೆ, ಹೊಸ ಬಾವಿ ನಿರ್ಮಿಸಲು ಸಾಧ್ಯವಾಗದಿರುವುದರಿಂದ ತ್ರಾಸಿ ಗ್ರಾಮದ ಮೊವಾಡಿ ಪ್ರದೇಶಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಹೊಸ ತೆರೆದ ಬಾವಿ ನಿರ್ಮಿಸಲು ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಸಂಬಂಧಪಟ್ಟ ಇಲಾಖೆ ಕಾರ್ಯಪ್ರವೃತ್ತರಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net