ಶಿಬಿರದಲ್ಲಿ ಪಡೆದ ಶಿಕ್ಷಣವನ್ನು ವಿದ್ಯಾರ್ಥಿಗಳು ತಮ್ಮ ನಿತ್ಯ ಅನುಷ್ಠಾನದಲ್ಲೂ ಅಳವಡಿಸಿಕೊಳ್ಳಬೇಕು. ಇದರಿಂದ ನಮ್ಮ ಸಂಸ್ಕಾರದ ಉಳಿವು ಸಾಧ್ಯ. ಮನೆ, ಮನೆಗಳಲ್ಲಿ ಗೋಶಾಲೆ ಇರಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.
ಪಡುಬಿದ್ರಿ ಬಾಸಟ್ಟದಲ್ಲಿ ಭಾನುವಾರ ನಡೆದ ವಸಂತ ಧಾರ್ಮಿಕ ಶಿಬಿರ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮಾತನಾಡಿ, ಸುಶಿಕ್ಷಿತರೂ, ಆಚಾರವಂತರೂ ಆಗುವ ಉದ್ದೇಶದಿಂದ ಪಡುಬಿದ್ರಿಯಲ್ಲಿ ಇಪ್ಪತ್ತು ವರ್ಷಗಳಿಂದ ನಿರಂತರ ಮಕ್ಕಳ ಧಾರ್ಮಿಕ ಶಿಬಿರ ಆಯೋಜಿಸಲಾಗುತ್ತಿದೆ. ಶಿಬಿರದ ಪಾಠವನ್ನು ಮನೆಯಲ್ಲಿ ಪಾಲಕರು ಪುನರಾವರ್ತಿಸಬೇಕು. ವಿದ್ಯಾರ್ಥಿಗಳು ಗಾಯತ್ರಿ ಪಠಣ, ವಿದ್ಯಾರ್ಥಿನಿಯರು ವಿವಿಧ ಸ್ತೋತ್ರಗಳನ್ನು ನಿತ್ಯ ಪಠಿಸಬೇಕು ಎಂದರು.
ಚಿತ್ರಾಪುರ ಮಠಾಧೀಶ ವಿದ್ಯೇಂದ್ರ ಶ್ರೀಗಳು, ಮಂಗಳೂರು ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಧ್ವನಗರದ ರಮಾಕಾಂತ ರಾವ್ ಹಾಗೂ ತಂಡದ ನಿರ್ದೇಶನದಲ್ಲಿ ಶಿಬಿರಾರ್ಥಿಗಳು ಸಂಕೀರ್ತನಾ ಕಲೆ ಪ್ರದರ್ಶಿಸಿದರು. ವೆಂಕಟೇಶ ಆಚಾರ್ಯ ಬಾಸಟ್ಟ ಸ್ವಾಗತಿಸಿದರು. ಧನಂಜಯ ಆಚಾರ್ಯ ನಿರೂಪಿಸಿದರು