ಬೆಳಗಾವಿ: ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪ ಪ್ರಕರಣ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರನ್ನು ಭೂಚಕ್ರದ ಸುಳಿಯಿಂದ ತಕ್ಷಣಕ್ಕೆ ಪಾರುಮಾಡಿದೆ. ಪ್ರಕರಣದ ಸಂಬಂಧ ಸೋಮವಾರ ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಬೇಕೆಂದು ಕಾಂಗ್ರೆಸ್ ಪಟ್ಟುಹಿಡಿದರೆ, ಕನ್ನಡಿಗರ ಭಾವನೆಗೆ ಧಕ್ಕೆ ತಂದ ಘಟನೆ ಚರ್ಚೆಯಾಗಬೇಕೆಂದು ಜೆಡಿಎಸ್ ಹಠ ಹಿಡಿಯಿತು. ಅತ್ತ, ನಿಯಮಾವಳಿಯಂತೆ ಕಲಾಪ ನಡೆಯಲಿ ಎಂದು ಬಿಜೆಪಿ ಬಿಗಿ ನಿಲುವು ತಳೆದ ಪರಿಣಾಮ ಗದ್ದಲದ ನಡುವೆ ಸ್ಪೀಕರ್ ಪ್ರಶ್ನೋತ್ತರ ಕಲಾಪ ಮುಗಿಸುವಂತಾಯಿತು.
ನಂತರವೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಮಧ್ಯಾಹ್ನ 2.30ರವರೆಗೆ ಮತ್ತೆ ಮುಂದೂಡಿಕೆಯಾಯಿತು. ಬಳಿಕವೂ ಜೆಡಿಎಸ್ ನಿಲುವು ಸಡಿಲಿಸದ ಕಾರಣ ಕಾಂಗ್ರೆಸ್ ತನ್ನ ಬೇಡಿಕೆಯಿಂದ ಹಿಂದೆ ಸರಿಯಿತು. ಕನ್ನಡಿಗರ ಭಾವನೆಗಳಿಗೆ ಧಕ್ಕೆ, ಅತಿವೃಷ್ಟಿ, ಉತ್ತರ ಕರ್ನಾಟಕದ ಪ್ರಮುಖ ಯೋಜನೆಗಳ ಬಗ್ಗೆ ಚರ್ಚೆ ನಡೆಯಬೇಕಿರುವ ಕಾರಣ ನಿಲುವಳಿ ಸೂಚನೆ, ಧರಣಿ ವಾಪಸ್ ಪಡೆಯುತ್ತೇವೆ. ಬಿಜೆಪಿ ಸರ್ಕಾರದ ಭಂಡತನ ಖಂಡಿಸಿ ಸಭಾತ್ಯಾಗ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಹೇಳಿದರೆ, ಪಕ್ಷದ ಉಳಿದ ಸದಸ್ಯರು ಅವರನ್ನು ಹಿಂಬಾಲಿಸಿದರು.
ಸ್ಪೀಕರ್ ತೀರ್ಪಿನಂತೆ ವಿಷಯ ಚರ್ಚೆಗೆ ಮುಂದಾಗಿದ್ದೇವೆಯೇ ಹೊರತು, ಸರ್ಕಾರದ ಭಂಡತನ ಎನ್ನುವುದು ಸರಿಯಲ್ಲವೆಂದು ಸಚಿವ ಮಾಧುಸ್ವಾಮಿ ಸಿಡಿಮಿಡಿಗೊಂಡರು. ಸದನ ಸೇರುತ್ತಿದ್ದಂತೆಯೇ ಭೂಕಬಳಿಕೆ ಆರೋಪದಡಿ ಬೈರತಿ ಬಸವರಾಜ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು ಹಿಡಿದು, ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ಮುಂದುವರಿಸಿತು. ಆದರೆ ಕನ್ನಡಿಗರ ವಿಷಯ ಚರ್ಚೆಗೆ ಮೊದಲ ಆದ್ಯತೆ ನೀಡಬೇಕು ಎಂದು ಜೆಡಿಎಸ್ ಆಗ್ರಹಿಸಿ ಪ್ರತಿಭಟನೆಗೆ ಇಳಿಯಿತು.
ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಳ್ಳುವುದಾಗಿ ಸ್ಪೀಕರ್ ಹೇಳುತ್ತಿದ್ದಂತೆಯೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪವೆತ್ತಿ, ನಿಲುವಳಿ ಸೂಚನೆಗೆ ಅವಕಾಶ ಕೋರಿದರು. ನಿಯಮಾವಳಿ ಪ್ರಕಾರ ಪ್ರಶ್ನೋತ್ತರ ಕಲಾಪ ನಡೆಸುವುದು ಸೂಕ್ತವೆಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪೀಕರ್ ನಿರ್ಧಾರ ಸಮರ್ಥಿಸಿದರು. ಬೈರತಿ ರಾಜೀನಾಮೆ ಕೊಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದರೆ, ಕನ್ನಡಿ ಗರಿಗೆ ನ್ಯಾಯಬೇಕು ಎಂದು ಪ್ರತಿಯಾಗಿ ಜೆಡಿಎಸ್ ಘೋಷಣೆ ಮೊಳಗಿಸಿತು.