ಬೆಂಗಳೂರು: ಬಸವಕಲ್ಯಾಣ ಮತ್ತು ಮಸ್ಕಿ ಉಪಚುನಾವಣೆಗೆ ಇನ್ನೊಂದು ವಾರದೊಳಗೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್ ತಾಲೀಮು ಆರಂಭಿಸಿದೆ. ಕಳೆದ ವಾರವೇ ಬಿಜೆಪಿ ಎರಡು ಕ್ಷೇತ್ರಕ್ಕೆ ಉಸ್ತುವಾರಿಗಳನ್ನು ಕಳಿಸಿಕೊಟ್ಟಿತ್ತು. ಆದರೆ, ರಾಜರಾಜೇಶ್ವರಿನಗರ ಹಾಗೂ ಶಿರಾ ಉಪಚುನಾವಣೆ ಸೋಲಿನಿಂದ ಕಂಗಾಲಾಗಿದ್ದ ಕಾಂಗ್ರೆಸ್ ಮಂಕಾಗಿ ಉಳಿದಿತ್ತು.
ಇದೀಗ ಮುಂದಿನ ಎರಡು ಕ್ಷೇತ್ರದಲ್ಲಾದರೂ ಆಡಳಿತಾರೂಢ ಪಕ್ಷಕ್ಕೆ ಎದಿರೇಟು ನೀಡಬೇಕೆಂದು ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚುನಾವಣೆ ನೇತೃತ್ವ ತೆಗೆದುಕೊಂಡಿದ್ದಾರೆ. ನ.22ರಂದು ಹೊಸಪೇಟೆಗೆ ತೆರಳಿ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುವ ಅವರು, 23ರಂದು ಬೆಳಗ್ಗೆ 11 ಗಂಟೆಗೆ ಮಸ್ಕಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳುವರು.
ಜತೆಗೆ ಕಳೆದ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಸವನಗೌಡ ತುರುವಿಹಾಳ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವರು. ಸಂಜೆ ಕ್ಷೇತ್ರದ ಕಾರ್ಯಕರ್ತರು, ಮುಖಂಡರನ್ನು ಭೇಟಿ ಮಾಡಿ ಚುನಾವಣೆಗೆ ಅವರನ್ನೆಲ್ಲ ಅಣಿಗೊಳಿಸಲಿದ್ದಾರೆ. ನ.24ರಂದು ಮಧ್ಯಾಹ್ನ ಬಸವಕಲ್ಯಾಣ ಕ್ಷೇತ್ರಕ್ಕೆ ಭೇಟಿ ನೀಡಿ ಕಾರ್ಯಕರ್ತರ ಸಭೆ ನಡೆಸುವರು.