ಜಿಲ್ಲೆ

ಬ್ಯಾಟರಾಯನಪುರ ಪೊಲೀಸ್​ ಠಾಣೆಯ ಎಎಸ್​ಐ ಕರೊನಾಗೆ ಬಲಿ

ಬೆಂಗಳೂರು: ಕರೊನಾ ಕಠಿಣ ನಿಯಮಗಳ ಸಮಯದಲ್ಲಿ, ಜನರ ನಿಯಂತ್ರಣಕ್ಕೆ ರಸ್ತೆಗಿಳಿದು ಕೆಲಸ ಮಾಡುತ್ತಿರುವ ಪೊಲೀಸರ ಮೇಲೂ ಕರೊನಾ ದಾಳಿ ಮುಂದುವರಿಸಿದೆ. ಇದೀಗ ಬ್ಯಾಟರಾಯನಪುರ ಪೊಲೀಸ್​ ಠಾಣೆಯ ಎಎಸ್​ಐ ಮುನಿಯಪ್ಪ (58) ಕರೊನಾ ಸೋಂಕಿಗೆ ತುತ್ತಾಗಿ ಬಲಿಯಾಗಿದ್ದಾರೆ.

ಕೆಲ ದಿನಗಳ ಹಿಂದೆ ಬ್ಯಾಟರಾಯನಪುರ ಪೊಲೀಸ್​ ಠಾಣೆಯಲ್ಲಿ ಕರೊನಾ ಪರೀಕ್ಷೆ ನಡೆಸಲಾಗಿತ್ತು. ಆ ವೇಳೆ ಮುನಿಯಪ್ಪ ಅವರಿಗೆ ಕರೊನಾ ಪಾಸಿಟಿವ್​ ಬಂದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ತೀವ್ರ ಉಸಿರಾಟದ ತೊಂದರೆಯಿಂದ ಭಾನುವಾರ ಸಂಜೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 2016ರಿಂದ ಬ್ಯಾಟರಾಯನಪುರ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಸಾವಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ಪೊಲೀಸ್​ ಇಲಾಖೆ ಇತರ ಪೊಲೀಸ್​ ಸಿಬ್ಬಂದಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

ಪೊಲೀಸ್​ ಠಾಣೆಯೇ ಸೀಲ್​ ಡೌನ್​:

ಬ್ಯಾಟರಾಯನಪುರ ಪೊಲೀಸ್​ ಠಾಣೆಯ 26 ಪೊಲೀಸ್​ ಸಿಬ್ಬಂದಿಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಳೆದ ಶನಿವಾರದಿಂದ ಠಾಣೆಯನ್ನೇ ಸೀಲ್​ಡೌನ್​ ಮಾಡಲಾಗಿದೆ. ಇವರೆಲ್ಲರೂ ಸೂಕ್ತ ಮುನ್ನೆಚ್ಚರಿಕೆ ವಹಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ಯಾಟರಾಯನಪುರ ಪೊಲೀಸ್​ ಠಾಣೆಯನ್ನು ಸದ್ಯ ಸಮೀಪದಲ್ಲಿರುವ ಕಲ್ಯಾಣ ಮಂಟಪಕ್ಕೆ ಸ್ಥಳಾಂತರಿಸಲಾಗಿದೆ.