ಜಿಲ್ಲೆ

ಉಪಚುನಾವಣೆ ಮತದಾನ ಶಾಂತಿಯುತ

ಸೌಮ್ಯ ಆರ್

ಬಂಟ್ವಾಳ: ಪುರಸಭೆಯ ವಾರ್ಡ್2ಕ್ಕೆ ತೆರವಾಗಿದ್ದ ಒಂದು ಸ್ಥಾನಕ್ಕೆ ಶನಿವಾರ ನಡೆದ ಉಪಚುನಾವಣೆಯು ಶಾಂತಯುತವಾಗಿ ನಡೆದಿದ್ದು, ಶೇ.71.82 ಮತದಾನವಾಗಿದೆ.

ಪುರಸಭೆಯ ವಾರ್ಡ್ 2ಕ್ಕೆ ಮಂಡಾಡಿ, ಗಿರಿಗುಡ್ಡೆ, ಜಕ್ರಿಬೆಟ್ಟುವಿನ ಒಂದು ಭಾಗ, ಆಗ್ರಾರ್, ಪೊಣ್ಣಂಗಿಲ ವ್ಯಾಪ್ತಿಯನ್ನು ಹೊಂದಿದ್ದು, ಈ ವಾರ್ಡಿನ ಒಟ್ಟು 1338 ಮತದಾರರ ಪೈಕಿ 961 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಕಸ್ಬಾ ಗ್ರಾಮದ ಮಂಡಾಡಿ ದ.ಕ.ಜಿ.ಪಂ.ಕಿ.ಪ್ರಾ.ಶಾಲೆಯ ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ನಡೆಯಿತು.

ಬಿಜೆಪಿಯಿಂದ ಎಲ್ .ಇಂದ್ರೇಶ್ ಪೂಜಾರಿ ಹಾಗೂ ಕಾಂಗ್ರೆಸ್‌ನಿಂದ ಪುರುಷೋತ್ತಮ ಬಂಗೇರ ಇವರಿಬ್ಬರೆ ಅಭ್ಯರ್ಥಿಗಳಾಗಿ ಕಣದಲ್ಲಿದ್ದು, ನೇರ ಹಣಾಹಣಿಯಿಂದಾಗಿ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟದೆ.

ಅವಿಭಜಿತ ಜಿಲ್ಲೆಯಲ್ಲಿ ನಗರ ಸ್ಥಳೀಯಾಡಳಿತ ಸಂಸ್ಥೆಯ ಪೈಕಿ ಬಂಟ್ವಾಳ ಪುರಸಭೆಯಲ್ಲಿ ತೆರವಾದ ಒಂದು ಸ್ಥಾನಕ್ಕೆ ಮತದಾನ ನಡೆದಿದ್ದರೆ, ತಾಲೂಕಿನ ಸ.ಮುನ್ನೂರು ಗ್ರಾ.ಪಂ.ನ- 3, ಪಂಜಿಕಲ್ಲಿನ 2 ಹಾಗೂ ಮಂಚಿ, ಪೆರ್ನೆ, ಚೆನ್ನೈ, ತ್ರೋಡಿ, ಸ.ಮೂಡ, ಅಮ್ಟಾಡಿ, ಬಡಗಬೆಳ್ಳೂರು ಗ್ರಾ.ಪಂ.ನ ತಲಾ ಒಂದು ಸ್ಥಾನಗಳಿಗೆ ಕೂಡ ಶನಿವಾರ ಶಾಂತಯುತವಾಗಿ ಮತದಾನ ನಡೆದಿದೆ.