ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ಮಾತನಾಡಿದರು. 
ಜಿಲ್ಲೆ

ಬ್ರಹ್ಮಾನಂದ ಆಶ್ರಮದಲ್ಲಿ ಬುತ್ತಿ ಹಬ್ಬಕ್ಕೆ ಚಾಲನೆ

ರಬಕವಿ-ಬನಹಟ್ಟಿ : ಪ್ರತಿ ವರ್ಷ ಜು. 31ರಂದು ಶ್ರೀ ಮಠದ ಶ್ರೀ ಗುರುಸಿದ್ಧೇಶ್ವರ ಶ್ರೀಗಳ ಹುಟ್ಟು ಹಬ್ಬದ ದಿನವನ್ನು ಪ್ರಸಕ್ತ ವರ್ಷದಿಂದ ಬುತ್ತಿ ಹಬ್ಬ ಎಂದು ಆಚರಿಸಲಾಗುವುದೆಂದು ಆಧ್ಯಾತ್ಮಿಕ ಚಿಂತಕ ಗಿರೀಶ ಮುತ್ತೂರ ಹೇಳಿದರು.

ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದಲ್ಲಿ ಶ್ರೀಗಳ ಜನ್ಮದಿನ ನಿಮಿತ್ತ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

ಶ್ರೀಗಳ ಜನ್ಮದಿನಕ್ಕೆ ನಗರದ ನೂರಾರು ಮಹಿಳೆಯರು ಅನೇಕ ತರಹದ ಖಾದ್ಯಗಳನ್ನು ತಯಾರಿಸಿಕೊಂಡು ಬಂದು ಶ್ರೀಗಳೊಂದಿಗೆ ಸಾವಿರಾರು ಜನರಿಗೆ ಉಣಬಡಿಸಿದ್ದು ಸಂತಸ ತಂದಿದೆ ಎಂದರು.

ಬಸಯ್ಯ ವಸದ ಮಾತನಾಡಿ, ಶ್ರೀಗಳ ಜನ್ಮದಿನದಂದು ಇಲ್ಲಿನ ಭಕ್ತರು ತಲೆ ಮೇಲೆ ಬುತ್ತಿ ಹೊತ್ತು ಬರುತ್ತಿರುವುದು ನೋಡಿ ಸಂತಸವಾಯಿತು. ಪ್ರಸಕ್ತ ವರ್ಷದಿಂದ ಈ ದಿನವನ್ನು ಬುತ್ತಿ ಹಬ್ಬ ಎಂದು ಆಚರಿಸುವುದು ಸೂಕ್ತವಾಗಿದೆ.

ಅದರಲ್ಲೂ ಎಲ್ಲರ ಮನೆಯಿಂದ ವಿವಿಧ ರೀತಿಯ ಜವಾರಿ ಊಟದ ಪದಾರ್ಥಗಳಾದ ಹುಳಿಬಾನ, ಚವಳಿ ಪಲ್ಲೆ, ಹೋಳಿಗೆ, ರೊಟ್ಟಿ, ಕೆಂಪು ಚಟ್ನಿ, ವಿವಿಧ ನಮೂನೆಯ ಪಲ್ಲೆ, ತುಪ್ಪ, ಸೊಪ್ಪು, ಮಾದಲಿ ಸೇರಿ ಬುತ್ತಿಯಲ್ಲಿ ತಂದ ಖಾದ್ಯಗಳನ್ನು ಸಾವಿರಾರು ಮಂದಿ ಸಂತಸದಿಂದ ಉಣಬಡಿಸಿದ್ದು ನಿಜಕ್ಕೂ ಸಂತಸದ ವಿಷಯ ಎಂದರು.

ಶ್ರೀ ಗುರುಸಿದ್ಧೇಶ್ವರ ಶ್ರೀಗಳು ಮಾತನಾಡಿ, ಭಕ್ತರ ಇಷ್ಟಾರ್ಥಗಳಿಗೆ ನಾವು ಮಾರು ಹೋಗಿದ್ದೇವೆ. ಇಷ್ಟೊಂದು ಪ್ರೀತಿ, ವಾತ್ಸಲ್ಯ ನಮ್ಮನ್ನು ಮೂಕವಿಸ್ಮಯವಾಗುವಂತೆ ಮಾಡಿದೆ.

ನಿತ್ಯ ಒಂದಿಷ್ಟು ಸಮಯವನ್ನು ಅಧ್ಯಾತ್ಮ ಚಿಂತನೆಯತ್ತ ಮೀಸಲಿಡಿ. ಬ್ರಹ್ಮಾನಂದರ ಆಶೀರ್ವಾದ ತಮ್ಮೆಲ್ಲರ ಮೇಲಿರಲಿ. ಎಲ್ಲರೂ ಆರೋಗ್ಯ ಮತ್ತು ಆನಂದಮಯ ಜೀವನ ಸಾಗಿಸಿ ಎಂದರು.

ವಿರುಪಾಕ್ಷಯ್ಯ ಹಿರೇಮಠ, ಎಂ. ಎಂ. ಮಿರ್ಜಿ, ಮಹಾದೇವ ಕವಿಶೆಟ್ಟಿ ಸೇರಿ ನೂರಾರು ಮಹಿಳಾ ಮಂಡಳದ ಸದಸ್ಯರು, ಹಿರಿಯ ಸಾಹಿತಿಗಳು ಭಾಗವಹಿಸಿ ಶ್ರೀಗಳನ್ನು ಸನ್ಮಾನಿಸಿದರು.