ಅಪಹರಣಕ್ಕೀಡಾಗಿದ್ದ ಉದ್ಯಮಿಯನ್ನು ಕರೆತರುತ್ತಿರುವ ಪೊಲೀಸರು. 
ಜಿಲ್ಲೆ

ಹಾಡಹಗಲೇ ರಿಯಲ್​ ಎಸ್ಟೇಟ್​ ಉದ್ಯಮಿಯ ಅಪಹರಣ; ಆಮೇಲಾಗಿದ್ದು ರೋಚಕ ಕಾರ್ಯಾಚರಣೆ

ಧಾರವಾಡ: ಹಾಡಹಗಲೇ ರಿಯಲ್​ ಎಸ್ಟೇಟ್​ ಉದ್ಯಮಿಯೊಬ್ಬರ ಅಪಹರಣವಾಗಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ರೋಚಕ ಕಾರ್ಯಾಚರಣೆ ನಡೆದಿದ್ದು, ಪ್ರಕರಣವನ್ನು ಸುಖಾಂತವಾಗಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಧಾರವಾಡದ ರಿಯಲ್​ ಎಸ್ಟೇಟ್​ ಉದ್ಯಮಿ ಶ್ರೀನಿವಾಸ ನಾಯ್ಡು ಎಂಬವರು ಅಪಹೃತರಾದವರು. ಇವರು ತಮ್ಮ ಅಳಿಯನೊಂದಿಗೆ ಜಮೀನು ನೋಡಲು ಹೋಗಿದ್ದಾಗ ದಾಳಿ ನಡೆಸಿದ್ದ ದುಷ್ಕರ್ಮಿಗಳು, ಅಳಿಯನ ಮೇಲೆ ಹಲ್ಲೆ ನಡೆಸಿ, ಶ್ರೀನಿವಾಸ ನಾಯ್ಡು ಅವರನ್ನು ಅಪಹರಿಸಿದ್ದರು.

ಅಪಹರಣದ ಬಗ್ಗೆ ಅಳಿಯ ದೂರು ನೀಡುತ್ತಿದ್ದಂತೆ ಕಾರ್ಯಾಚರಣೆಗಿಳಿದ ಪೊಲೀಸರು ಅಪಹರಣ ನಡೆದ ನಾಲ್ಕೇ ಗಂಟೆಗಳಲ್ಲಿ ಉದ್ಯಮಿಯನ್ನು ಪತ್ತೆ ಮಾಡಿ ರಕ್ಷಿಸಿದ್ದಾರೆ. ಅಪಹರಣಕಾರರು ಉದ್ಯಮಿಯನ್ನು ಧಾರವಾಡ ಹೊರವಲಯದ ದೇವರ ಹುಬ್ಬಳ್ಳಿಯ ಶೆಡ್ ಒಂದರಲ್ಲಿ ಕೂಡಿ ಹಾಕಿದ್ದರು. ಪೊಲೀಸರು ಅಲ್ಲಿಗೆ ತೆರಳುತ್ತಿದ್ದಂತೆ ಅಪಹರಣಕಾರರು ಪರಾರಿಯಾಗಿದ್ದಾರೆ. ಪೊಲೀಸರು ಉದ್ಯಮಿಯನ್ನು ಧಾರವಾಡ ವಿದ್ಯಾಗಿರಿ ಪೊಲೀಸ್​ ಠಾಣೆಗೆ ಕರೆತಂದಿದ್ದು, ಅಲ್ಲಿಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್​ ಭೇಟಿಯಾಗಿದ್ದಾರೆ.