ಬೆಂಗಳೂರು: ಕೇಂದ್ರ ಸರ್ಕಾರ ಹೊರಡಿಸಿರುವ ಲಾಕ್ಡೌನ್ ನಿಯಮ ಮಾರ್ಗಸೂಚಿ ಅನ್ವಯದ ನಗರದ ಕಂಟೇನ್ಮೆಂಟ್ ವಲಯಗಳಲ್ಲಿ ಜೂ.30ರವರೆಗೆ ಲಾಕ್ಡೌನ್ ಮುಂದುವರಿಯಲಿದೆ. ಆದರೆ, ಬೆಳಗ್ಗೆ 7 ರಿಂದ ರಾತ್ರಿ 7ರವರೆಗಿದ್ದ ನಿಷೇಧಾಜ್ಞೆ ಪರಿಷ್ಕೃತಗೊಳಿಸಿ ಬೆಳಗ್ಗೆ 5ರಿಂದ ರಾತ್ರಿ 9ರವರೆಗೆ ವಿಸ್ತರಿಸಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.
ಜೂನ್ 8ರಿಂದ ಏನಿರಲಿವೆ? ಧಾರ್ವಿುಕ ಕೇಂದ್ರಗಳು, ಹೋಟೆಲ್, ರೆಸ್ಟೋರೆಂಟ್, ಶಾಪಿಂಗ್ ಮಾಲ್ಗಳು ತೆರೆಯಲಿವೆ. ಜೂನ್ ಅಂತ್ಯದವರೆಗೂ ಶಾಲೆ-ಕಾಲೇಜು, ತರಬೇತಿ ಕೇಂದ್ರ ಹಾಗೂ ಇತರೆ ಶಿಕ್ಷಣ ಸಂಸ್ಥೆಗಳು ಆರಂಭವಾಗುವುದಿಲ್ಲ. ಶಿಕ್ಷಣ ಸಂಸ್ಥೆ, ಪಾಲಕರಿಂದ ಪ್ರತಿಕ್ರಿಯೆ ಪಡೆದು ಜುಲೈನಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ.
ಜೂ.8ರ ನಂತರ ಎಲ್ಲ ಧಾರ್ವಿುಕ ಕೇಂದ್ರಗಳು, ಹೋಟೆಲ್, ರೆಸ್ಟೋರೆಂಟ್ ಹಾಗೂ ಶಾಪಿಂಗ್ ಮಾಲ್ ಆರಂಭವಾಗಲಿವೆ. ಅಲ್ಲದೆ, ಜೂ.30ರವರೆಗೆ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಭಾನುವಾರ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಲಾಕ್ಡೌನ್ ನಿಯಮ ಸಡಿಲಿಕೆ ಕಂಟೇನ್ಮೆಂಟ್ ವಲಯಗಳಿಗೆ ಅನ್ವಯಿಸುವುದಿಲ್ಲ. ಈ ಪ್ರದೇಶದಲ್ಲಿ ಹಿಂದಿನಂತೆಯೇ ಆರೋಗ್ಯ ಸೇವೆ, ತುರ್ತಸೇವೆ ಹಾಗೂ ಅಗತ್ಯವಸ್ತುಗಳ ಪೂರೈಕೆಗೆ ಅವಕಾಶವಿರಲಿದೆ. 65 ವರ್ಷ ಮೇಲ್ಪಟ್ಟ ವ್ಯಕ್ತಿಗಳು, 10 ವರ್ಷ ಒಳಗಿನ ಮಕ್ಕಳು, ಆರೋಗ್ಯ ಸಮಸ್ಯೆ ಇರುವವರು, ಗರ್ಭಿಣಿಯರು ಮನೆಯಲ್ಲಿಯೇ ಇರಬೇಕು.