ಸಿರಗುಪ್ಪ ನಗರದ ಬಸ್‌ನಿಲ್ದಾಣದಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳು ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದ ಸ್ಥಳಕ್ಕೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ತಂಬ್ರಹಳ್ಳಿ ಡಾ.ವೀರಭದ್ರಪ್ಪ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಸಾರಿಗೆ ಇಲಾಖೆ ಅಧಿಕಾರಿ ಕೃಷ್ಣ ಹಾಗೂ ಇತರರಿದ್ದರು. 
ಜಿಲ್ಲೆ

ಬಸ್ ಸಂಚಾರ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

ರುದ್ರಪ್ಪ ವಾಲಿ

ವಿಜಯವಾಣಿ ಸುದ್ದಿಜಾಲ ಸಿರಗುಪ್ಪ
ಬಸ್ ನಿಲ್ದಾಣದಿಂದ ಕಾಲೇಜಿಗೆ ಹೋಗಿ ಬರಲು ಬಸ್ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ನಗರದ ಬಸ್‌ನಿಲ್ದಾಣದಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳು ಗುರುವಾರ ಬೆಳಗ್ಗೆ ವಿವಿಧ ಊರುಗಳಿಗೆ ಹೊರಟಿದ್ದ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಅಧಿಕಾರಿಗಳಿಗೆ ಮನವಿ

ವಿದ್ಯಾರ್ಥಿ ವಿಜಯ್ ಮಾತನಾಡಿ, ಕಾಲೇಜು ನಗರದಿಂದ ನಾಲ್ಕು ಕಿ.ಮಿ. ದೂರವಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಸಾರಿಗೆ ಬಸ್‌ಗಳು ಕಾಲೇಜು ಹತ್ತಿರ ನಿಲ್ಲಿಸುವುದಿಲ್ಲ. ಬಸ್‌ಗಳು ಖಾಲಿಯಿದ್ದರೂ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳದೆ ಹಾಗೇ ಹೋಗುತ್ತಿದ್ದಾರೆ. ಅಲ್ಲದೆ ವಿವಿಧ ಗ್ರಾಮಗಳಿಂದ ಬಂದ ವಿದ್ಯಾರ್ಥಿಗಳು ಕಾಲೇಜಿಗೆ ತೆರಳಲು ನಿಲ್ದಾಣದಲ್ಲಿ ಬಸ್‌ನಲ್ಲಿ ಹತ್ತಲು ನಿರ್ವಾಹಕರು ಕಾಲೇಜು ಹತ್ತಿರ ನಮ್ಮ ಬಸ್ ನಿಲ್ಲುವುದಿಲ್ಲ. ಹಳ್ಳಿಕಡೆ ಹೋಗುವ ಬಸ್‌ಗಳನ್ನು ಹತ್ತಿ ಕಾಲೇಜಿಗೆ ಹೋಗಿ ಎಂದು ಹೇಳುತ್ತಿದ್ದಾರೆ. ಇದರಿಂದಾಗಿ ಕಾಲೇಜಿಗೆ ತೆರಳಲು ಅನನೂಕೂಲವಾಗುತ್ತಿದೆ. ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡುವಂತೆ ಹಲವುಬಾರಿ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು.

ವಿದ್ಯಾರ್ಥಿನಿ ಮಂಜುಶ್ರೀ ಮಾತನಾಡಿ, ಕಾಲೇಜಿಗೆ ತೆರಳಲು ಬಸ್‌ನಿಲ್ದಾಣದಲ್ಲಿ ನಿರ್ವಾಹಕರು ಕಿರಿ ಕಿರಿ ಮಾಡುತ್ತಾರೆ. ಕಾಲೇಜಿನಿಂದ ನಮ್ಮ ಗ್ರಾಮಗಳಿಗೆ ತೆರಳಲು ಕಾಲೇಜು ಹತ್ತಿರ ನಿಲ್ಲಿಸುವಂತೆ ಮನವಿ ಮಾಡಿದರೂ ಹಾಗೇ ಹೊರಟು ಹೋಗುತ್ತಾರೆ. ಇದರಿಂದ ಪ್ರತಿನಿತ್ಯವೂ ಕಾಲೇಜಿಗೆ ಹೋಗಿ ಬರಲು ತೀವ್ರ ಸಮಸ್ಯೆ ಉಂಟಾಗುತ್ತಿದೆ ಎಂದರು.

ಪ್ರತಿಭಟನೆಯಿಂದ ಕೆಲ ಸಮಯ ನಗರದ ಬಸ್‌ನಿಲ್ದಾಣದಲ್ಲಿ ಬಸ್‌ಗಳು ನಿಂತಿದ್ದರಿಂದ ಬೇರೆ ಊರಿಗೆ ತೆರಳುವ ಪ್ರಯಾಣಿಕರಿಗೆ ತೊಂದರೆಯಾಯಿತು. ಸಾರಿಗೆ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳ ಮನ ಒಲಿಸಲು ಪ್ರಯತ್ನಿಸಿದರು ಪ್ರತಿಭಟನೆ ಮುಂದುವರೆಸಿದರು.
ವಿಷಯ ತಿಳಿದ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ತಂಬ್ರಳ್ಳಿ ಡಾ.ವೀರಭದ್ರಪ್ಪ ಬಂದು ವಿದ್ಯಾರ್ಥಿಗಳ ಮನ ಒಲಿಸಿ ಪ್ರತಿಭಟನೆ ಕೈಬಿಡುವಂತೆ ತಿಳಿಸಿದರು.

ಪ್ರಾಂಶುಪಾಲರು ಮಾತನಾಡಿ, ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದರು. ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್‌ಗಳನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿ ಕೃಷ್ಣ ತಿಳಿಸಿದರು.