More

    ಸಿದ್ದರಾಮೋತ್ಸವದಿಂದ ಬಸ್ ಕೊರತೆ; ಬಸ್‌ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ ವಿದ್ಯಾರ್ಥಿಗಳ ಗೋಳು ಕೇಳೋರಿಲ್ಲ

    ಬಳ್ಳಾರಿ: ದಾವಣಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 75ನೇ ಹುಟ್ಟು ಹಬ್ಬದ ಅಮೃತಮಹೋತ್ಸವ ಹಿನ್ನೆಲೆ ಬಳ್ಳಾರಿ ಬಸ್‌ನಿಲ್ದಾಣಗಳಲ್ಲಿ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಬಸ್ ಇಲ್ಲದೆ ಬುಧವಾರ ಪರದಾಡಿದರು.

    ಮಂಗಳವಾರ ರಾತ್ರಿ ಮತ್ತು ಬುಧವಾರ ಮುಂಜಾನೆ ಇಲ್ಲಿನ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಿಂದ 200 ರಿಂದ 250 ಬಸ್‌ಗಳನ್ನು ದಾವಣಗೆರೆಗೆ ಬಾಡಿಗೆ ಬಿಡಲಾಗಿದೆ. ಹೀಗಾಗಿ, ಇಲ್ಲಿನ ಪ್ರಯಾಣಿಕರು ತೀವ್ರ ಬಸ್‌ಗಳ ಕೊರತೆ ಎದುರಿಸಿದರು.

    ತಾಲೂಕಿನ ಕೊಳಗಲ್ಲು, ಮೋಕಾ, ಸಿಂಧುವಾಳ, ಕಪಗಲ್ಲು, ಸಿರಿವಾರ, ಕರ್ಚೇಡು, ಹಡ್ಲಗಿ, ಬಸರಕೋಡು, ಕೋಳೂರು, ಸೋಮಸಮುದ್ರ, ತಾಳೂರು, ಕೊರ‌್ಲಗುಂದಿ, ಹಂದಿಹಾಳು, ಚಾನಾಳು, ಗುಡದೂರು, ಸಂಜೀವರಾಯನಕೋಟೆ, ಅಸುಂಡಿ, ಮಿಂಚೇರಿ, ಕುಡತಿನಿ ಸೇರಿದಂತೆ ಸುತ್ತಲಿನ ಊರುಗಳ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಬಸ್ ಇಲ್ಲದೆ ಪರದಾಡಿದರು. ಇದರ ಜತೆಗೆ ಬಳ್ಳಾರಿಯಿಂದ ದೂರದ ಊರುಗಳಾದ ಕುರುಗೋಡು, ಹೊಸಪೇಟೆ, ಸಿರಗುಪ್ಪ, ಕೂಡ್ಲಿಗಿ, ಹಡಗಲಿ, ಹರಪನಹಳ್ಳಿ, ಸಿರಗುಪ್ಪ, ಕಂಪ್ಲಿ ಮಾರ್ಗ ಕಡೆ ತೆರಳುವ ಪ್ರಯಾಣಿಕರು ಕೂಡ ಮೂರರಿಂದ ನಾಲ್ಕು ತಾಸು ಬಸ್ ಕಾಯುವ ಪರಿಸ್ಥಿತಿ ಎದುರಾಯಿತು. ಇನ್ನು ಬರುವ ಒಂದೇ ಬಸ್‌ಗೆ ಬಾಗಿಲುಗಳಿಗೆ ನೇತಾಡಿಕೊಂಡು ತೆರಳಿದರು. ಇನ್ನು ಕೆಲವರು ಸಂಜೆವರೆಗೂ ಕಾದು ಊರಿನ ಕಡೆ ಪ್ರಯಾಣಿಸಿದರು.

    ಕಾದುಕಾದು ಸಕಾಗಿ ಮಲಗಿದ್ದೇವೆ : ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಮುಂಜಾನೆಯಿಂದ ಸಮರ್ಪಕ ಬಸ್‌ಗಳು ಇಲ್ಲದ ಕಾರಣ ನಿಲ್ದಾಣದಲ್ಲೇ ಮಲಗಿರುವುದು ಕಂಡು ಬಂತು. ಸುತ್ತಲಿನ ಊರುಗಳಿಗೆ ಆಟೋ, ಟಂಟಂ ಇವೆ. ಆದರೆ, ದರೋಜಿ, ಕಂಪ್ಲಿ ಕಡೆ ತೆರಳುವ ಆಟೋ ಇಲ್ಲದ ಕಾರಣ ಅನಿವಾರ್ಯವಾಗಿ ಬಸ್‌ಗೆ ಹೋಗಲೇಬೇಕು. ಹೀಗಾಗಿ, ಬಸ್‌ಗೆ ಕಾದುಕಾದು ಸಕಾಗಿ ಮಲಗಿದ್ದೇವೆ ಎಂದು ಪ್ರಯಾಣಿಕರು ತಿಳಿಸಿದರು.

    ಖಾಸಗಿ ವಾಹನಗಳಿಗೆ ಮೊರೆ: ಸಿದ್ದರಾಮಯ್ಯ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಬಸ್ ಕೊರತೆಯಿಂದ ಅನೇಕ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಅನಿವಾರ್ಯವಾಗಿ ದುಪಟ್ಟು ಹಣ ನೀಡಿ ಖಾಸಗಿ ವಾಹನಗಳಿಗೆ ಮೊರೆ ಹೋದರು. ಇಲ್ಲಿನ ಶ್ರೀಧರಗಡ್ಡೆ, ಕೊಳಗಲ್ಲು, ಮೋಕಾ, ತಾಳೂರು, ಉತ್ತನೂರು, ಕುರುಗೋಡು ಸೇರಿದಂತೆ ಇತರ ಪ್ರದೇಶಗಳ ಕಡೆ ಖಾಸಗಿ ವಾಹನಗಳಲ್ಲಿ ಪ್ರಯಾಣಿಕರು ತೆರಳುತ್ತಿರವುದು ಕಂಡು ಬಂತು.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಟ್ಟುಹಬ್ಬದ ಅಮೃತ ಮಹೋತ್ಸವ ಹಿನ್ನೆಲೆ ಬಳ್ಳಾರಿಯಿಂದ ದಾವಣಗೆರೆಗೆ 198 ಬಸ್‌ಗಳನ್ನು ಕಳಿಸಲಾಗಿದೆ. ಆದರೆ, ಗ್ರಾಮಾಂತರ ಪ್ರದೇಶದಲ್ಲಿ ಬಸ್‌ಗಳು ಓಡಾಟ ನಡೆಸುತ್ತಿವೆ. ಬಸ್‌ಗಳ ಕೊರತೆ ಇಲ್ಲ.
    | ಡಿ.ಎಂ.ದೇವರಾಜ, ವಿಭಾಗಿಯ ನಿಯಂತ್ರಣಾಧಿಕಾರಿ, ಬಳ್ಳಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts