ವಿಜಯವಾಣಿ ಸುದ್ದಿಜಾಲ, ಪುತ್ತೂರು ಗ್ರಾಮಾಂತರ
ಭಾರಿ ವಾಹನಗಳ ಸಂಚಾರ ನಿಷೇಧಗೊಂಡಿದ್ದ ಚೆಲ್ಯಡ್ಕ ಮುಳುಗು ಸೇತುವೆಯಲ್ಲಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ದ.ಕ. ಜಿಲ್ಲಾಧಿಕಾರಿ ಅವರನ್ನು ಒತ್ತಾಯಿಸಿ ಒಳಮೊಗ್ರು ಗ್ರಾಪಂ ಸಾಮಾನ್ಯ ಸಭೆ ನಿರ್ಣಯ ಕೈಗೊಂಡಿತು.
ಒಳಮೊಗ್ರು ಗ್ರಾ.ಪಂ. ಸಾಮಾನ್ಯ ಸಭೆ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.
ವಿಷಯ ಪ್ರಸ್ತಾಪಿಸಿದ ಸದಸ್ಯ ಮಹೇಶ್ ರೈ ಕೇರಿ, ಒಳಮೊಗ್ರು, ಆರ್ಯಾಪು ಮತ್ತು ಬೆಟ್ಟಂಪಾಡಿ ಗ್ರಾಮ ವ್ಯಾಪ್ತಿಯ ಜನತೆಗೆ ಸಂಪರ್ಕಕೊಂಡಿಯಾಗಿರುವ ಶತಮಾನಗಳಷ್ಟು ಹಳೆಯ ಚೆಲ್ಯಡ್ಕ ಸೇತುವೆ ಶಿಥಿಲಗೊಂಡ ಹಿನ್ನೆಲೆಯಲ್ಲಿ ಕಳೆದ ಮಳೆಗಾಲದಲ್ಲಿ ಜಿಲ್ಲಾಧಿಕಾರಿ ಸೇತುವೆ ಪರಿಶೀಲನೆ ಮಾಡಿ ಭಾರಿ ವಾಹನ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿದ್ದರು. ಆದರೆ ಇದೀಗ ಸೇತುವೆ ಮೇಲೆ ಬಸ್ ಹೊರತುಪಡಿಸಿ ಬೇರೆ ಎಲ್ಲ ಭಾರಿ ವಾಹನಗಳು ಸಂಚರಿಸುತ್ತಿವೆ. ಬಸ್ ಸಂಚಾರವಿಲ್ಲದೆ ಈ ಭಾಗದ ನೂರಾರು ಗ್ರಾಮಸ್ಥರಿಗೆ, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಮಳೆಯೂ ಕಡಿಮೆಯಾಗಿರುವುದರಿಂದ ಬಸ್ ಸಂಚಾರಕ್ಕೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಸಭೆ ನಿರ್ಧರಿಸಿತು.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ ಸಾರ್ವಜನಿಕ ಅರ್ಜಿ ಹಾಗೂ ಸರ್ಕಾರದ ಸುತ್ತೋಲೆಗಳನ್ನು ಸಭೆಯ ಮುಂದಿಟ್ಟರು. ಕಾರ್ಯದರ್ಶಿ ಜಯಂತಿ ನಿರ್ಣಯ ದಾಖಲಿಸಿಕೊಂಡರು. ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರಾದ ವಿನೋದ್ ಶೆಟ್ಟಿ ಮುಡಾಲ, ಶೀನಪ್ಪ ನಾಯ್ಕ, ಪ್ರದೀಪ್ ದರ್ಬೆತ್ತಡ್ಕ, ಲತೀಫ್ ಕುಂಬ್ರ, ಸಿರಾಜುದ್ದೀನ್, ಶಾರದಾ ಆಚಾರ್ಯ, ರೇಖಾ ಬಿಜತ್ರೆ, ಸುಂದರಿ ಪರ್ಪುಂಜ, ಚಿತ್ರಾ ಬಿ.ಸಿ, ನಿಮಿತಾ ರೈ, ನಳಿನಾಕ್ಷಿ ಉಪಸ್ಥಿತರಿದ್ದರು.
ಕಸ ಹಾಕಿದಲ್ಲಿ ಸೂಕ್ತ ಕ್ರಮ
ಸ್ವಚ್ಛ ವಾಹಿನಿ ವಾಹನ ಗ್ರಾಮದೆಲ್ಲೆಡೆ ಸಂಚರಿಸಿ ತ್ಯಾಜ್ಯ ಸಂಗ್ರಹ ಮಾಡುತ್ತಿದೆ. ಆದರೂ ಸ್ವಚ್ಛತೆಗೆ ಸಹಕಾರ ನೀಡದಿರುವ, ಕಸಗಳನ್ನು ತ್ಯಾಜ್ಯ ವಾಹನಕ್ಕೆ ನೀಡದಿರುವ ಮಂದಿಗೆ ಸರ್ಕಾರದ ಸವಲತ್ತು ನೀಡುವಲ್ಲಿ ಕೆಲವೊಂದು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.