ಜಿಲ್ಲೆ

ಕುಡುಕರ, ನಾಯಿಗಳ ಆಶ್ರಯ ತಾಣ : ಮೊಲೊಟ್ಟು ಬಸ್ ತಂಗುದಾಣ ಪ್ರವೇಶ ಅಸಾಧ್ಯ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಮೂಲ್ಕಿ

ಕಾರ್ನಾಡು ಜೇರಿಕಟ್ಟೆಯಿಂದ ಮೊಲೊಟ್ಟು ಹೋಗುವ ದಾರಿ ಬದಿಯಲ್ಲಿರುವ ಬಸ್ ತಂಗುದಾಣದಲ್ಲಿ ಆಹಾರ ತ್ಯಾಜ್ಯ ಕೊಳೆತು ದುರ್ವಾಸನೆ ಬೀರುತ್ತಿದ್ದು ತಂಗುದಾಣದೊಳಗೆ ಪ್ರವೇಶಿಲು ಅಸಾಧ್ಯವಾಗಿದೆ.

ಮೂಲ್ಕಿ ಲಯನ್ಸ್ ಹಾಗೂ ಲಿಯೋ ಸಂಸ್ಥೆ ಜಂಟಿಯಾಗಿ ಬಸ್ ತಂಗುದಾಣ ನವೀಕರಣಗೊಳಿಸಿ ಲೋಕಾರ್ಪಣೆಗೊಳಿಸಲಾಗಿತ್ತು. ಆದರೆ ಈಗ ಬಸ್ ತಂಗುದಾಣದಲ್ಲಿ ಕುಡುಕರು ಹಾಗೂ ಅಪರಿಚಿತ ವ್ಯಕ್ತಿಗಳು, ಮತಿಭ್ರಮಣೆ ಹೊಂದಿದವರ ತಾಣವಾಗಿದ್ದು ಅವರು ತಿಂದು ಬಿಸಾಡಿದ ವಸ್ತುಗಳು ಮತ್ತು ಕೆಲವರು ಬೀಡಾಡಿ ನಾಯಿಗಳಿಗೆ ಆಹಾರ ತಂದು ಹಾಕುತ್ತಿದ್ದು, ನಾಯಿಗಳು ಅರ್ಧಂಬರ್ಧ ತಿಂದ ಆಹಾರ ಕೊಳೆತು ದುರ್ವಾಸನೆಯುಕ್ತ ವಾತಾವರಣ ಸೃಷ್ಟಿಯಾಗಿದ್ದು ಪ್ರಯಾಣಿಕರಿಗೆ ಕುಳಿತುಕೊಳ್ಳಲು ಹೇಸಿಗೆಯಾಗುತ್ತಿದೆ.

ಬಸ್ ತಂಗುದಾಣದ ಹಿಂದುಗಡೆ ಮಧ್ಯದ ಬಾಟಲಿಗಳ ರಾಶಿ ಇದ್ದು, ಈ ಬಗ್ಗೆ ಮೂಲ್ಕಿ ನಗರ ಪಂಚಾಯಿತಿ ಅಧಿಕಾರಿಗಳು ಬಸ್ ತಂಗುದಾಣ ಸರಿಪಡಿಸಬೇಕು, ತಂಗುದಾಣದಲ್ಲಿ ಮಲಗುವ ಕುಡುಕರ ಬಗ್ಗೆ ಪೊಲೀಸರು ಕ್ರಮಕೈಗೊಳ್ಳಬೇಕು, ಬೀದಿ ನಾಯಿಗಳಿಗೆ ಆಹಾರ ಹಾಕುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.