ಜಿಲ್ಲೆ

ಸರ್ಕಾರಿ ಬಸ್ ಸೇವೆ ವ್ಯತ್ಯಯ : ಚಾಲಕರ ಗುತ್ತಿಗೆ ಮುಗಿದ ಹಿನ್ನೆಲೆ : ಪ್ರಯಾಣಿಕರ ಪರದಾಟ

ಸೌಮ್ಯ ಆರ್

ಬೆಳ್ತಂಗಡಿ: ಕೆಎಸ್‌ಆರ್‌ಟಿಸಿ ಧರ್ಮಸ್ಥಳ ಡಿಪೋದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಸ್ ಚಾಲಕರ ಗುತ್ತಿಗೆ ಅವಧಿ ಮುಗಿದಿದ್ದು ಅವರು ಸೋಮವಾರ ಕೆಲಸಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯವಾಯಿತು.

ಧರ್ಮಸ್ಥಳ ಡಿಪೋದಲ್ಲಿ 128 ಬಸ್‌ಗಳಿದ್ದು, 121 ಅನುಸೂಚಿ, 136 ಚಾಲಕ ಕಂ ನಿರ್ವಾಹಕ, 75 ಚಾಲಕ ಹಾಗೂ 29 ನಿರ್ವಾಹಕರು ಕಾರ್ಯನಿರ್ವಹಿಸುತ್ತಿದ್ದಾರೆ. ಗುತ್ತಿಗೆ ಆಧಾರದ 72 ಚಾಲಕರು ಕರ್ತವ್ಯ ನಿರ್ವಹಿಸುತ್ತಿದ್ದು ಪ್ರಸ್ತುತ ಇವರು ಸೇವೆಗೆ ಲಭ್ಯರಾಗದ ಕಾರಣದಿಂದ ಸಮಸ್ಯೆ ಉದ್ಭವಿಸಿದೆ.

ಪೂಜ್ಯಾಯ ಮತ್ತು ಪನ್ನಗ ಗುತ್ತಿಗೆ ಸಂಸ್ಥೆ ಅಡಿ ಕಾರ್ಯ ನಿರ್ವಹಿಸುತ್ತಿರುವ ಈ ಚಾಲಕರ ಗುತ್ತಿಗೆ ಅವಧಿ ಮುಗಿದಿದ್ದು, ನವೀಕರಣ ಪ್ರಕ್ರಿಯೆ ನಡೆಯಬೇಕಿದೆ. ಇದಕ್ಕೆ ಇನ್ನೂ ನಾಲ್ಕು ದಿನ ಬೇಕಾಗುವ ಸಾಧ್ಯತೆ ಇರುವ ಕಾರಣ ಸಮಸ್ಯೆ ಅಷ್ಟು ದಿನ ಸಮಸ್ಯೆ ಮುಂದುವರಿಯಲಿದೆ.

ಸ್ಥಳೀಯ ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗದಂತೆ ಬಸ್ ಓಡಾಟ ವ್ಯವಸ್ಥೆ ಮಾಡಲಾಗಿದ್ದು, ದೂರದ ಊರುಗಳ ಕೆಲವು ಟ್ರಿಪ್‌ಗಳನ್ನು ಕಡಿತಗೊಳಿಸುವ ಅನಿವಾರ್ಯತೆ ಉಂಟಾಗಿದೆ. ಇತರ ಡಿಪೋಗಳಿಂದ ಬರುವ ಬಸ್‌ಗಳಲ್ಲಿ ದೂರದ ಊರಿನ ಪ್ರಯಾಣಿಕರಿಗೆ ಪ್ರಯಾಣಕ್ಕೆ ಅನುಕೂಲ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ಜಾರಿಯಲ್ಲಿವೆ ಎಂದು ಧರ್ಮಸ್ಥಳ ಡಿಪೋದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣಿಕರ ಸಂಕಷ್ಟ: ಧರ್ಮಸ್ಥಳ, ಉಜಿರೆ, ಬೆಳ್ತಂಗಡಿ ಮೊದಲಾದ ಕಡೆಯಿಂದ ಬೇರೆ-ಬೇರೆ ಊರುಗಳಿಗೆ ತೆರಳುವ ಮಂದಿ ಬಸ್ ವ್ಯತ್ಯಯದಿಂದ ಸಂಕಷ್ಟ ಅನುಭವಿಸಿದರು. ಸೋಮವಾರವಾದ ಕಾರಣ ಹೆಚ್ಚಿನ ಜನಸಂದಣಿ ಕಂಡುಬಂದಿತ್ತು. ಈ ಸಮಸ್ಯೆ ಇನ್ನೂ ಕೆಲವು ದಿನ ಮುಂದುವರಿಯಲಿರುವ ಕಾರಣ ಪ್ರಯಾಣಿಕರು ಪರದಾಡಬೇಕಾದ ಪರಿಸ್ಥಿತಿ ಅನಿವಾರ್ಯ.

ಚಾಲಕರ ಆಕ್ರೋಶ

ಗುತ್ತಿಗೆ ಅವಧಿ ಮುಗಿದಿರುವ ಚಾಲಕರು ತಾವು ಕಾರ್ಯನಿರ್ವಹಿಸುವ ಗುತ್ತಿಗೆ ಸಂಸ್ಥೆಗೆ ಈಗಾಗಲೇ 25,000 ರೂ. ಠೇವಣಿ ಇರಿಸಿದ್ದಾರೆ. ಈಗ ಸಂಸ್ಥೆ 10,000 ರೂ. ಹೆಚ್ಚುವರಿ ಠೇವಣಿ ಕೇಳುತ್ತಿದ್ದು ಈ ಬಗ್ಗೆ ಚಾಲಕರಿಂದ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರ ನೀಡುತ್ತಿರುವ ಸಂಬಳದಲ್ಲಿ ಗುತ್ತಿಗೆ ಸಂಸ್ಥೆ ಸಾಕಷ್ಟು ಕಡಿತ ಮಾಡುತ್ತಿದ್ದು ನಿಗದಿಪಡಿಸಿದ ಮೊತ್ತವನ್ನು ಒದಗಿಸುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.