ಜಿಲ್ಲೆ

ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ

ಸೌಮ್ಯ ಆರ್

ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಕೋಲ್ನಾಡ್ ಪೆಟ್ರೋಲ್ ಬಂಕ್ ಬಳಿ ಬಸ್‌ನ ಸ್ಟೇರಿಂಗ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡು ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಉತ್ತರ ಕರ್ನಾಟಕದ ಯಲ್ಲಾಪುರ ಡಿಪೋದ ಕೆಎಸ್‌ಆರ್‌ಟಿಸಿ ಬಸ್ ಮಂಗಳವಾರ ಸಂಜೆ 4.30ಕ್ಕೆ ಹುಬ್ಬಳ್ಳಿಯಿಂದ ಮಂಗಳೂರು ಕಡೆಗೆ ಹೊರಟಿದ್ದು, ರಾತ್ರಿ 2 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66ರ ಕೋಲ್ನಾಡು ಬಳಿ ಸ್ಟೇರಿಂಗ್‌ನಲ್ಲಿ ಸಮಸ್ಯೆ ತೀವ್ರಗೊಂಡು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಹೆದ್ದಾರಿ ಬದಿಯ ಪೆಟ್ರೋಲ್ ಬಂಕ್ ಕಡೆಗೆ ಮುಖ ಮಾಡಿ ನಿಂತಿದೆ.

ಕೂಡಲೇ ವಿದ್ಯುತ್ ಕಂಬದಲ್ಲಿ ವಿದ್ಯುತ್ ಪ್ರವಹಿಸುವಿಕೆ ನಿಲುಗಡೆಯಾದ ಕಾರಣ ಅನಾಹುತ ತಪ್ಪಿದೆ. ಅಪಘಾತದ ಸಂದರ್ಭ ಬಸ್‌ನಲ್ಲಿದ್ದ 15 ಪ್ರಯಾಣಿಕರ ಪೈಕಿ ಓರ್ವ ಸಣ್ಣ ಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು, ಮೆಸ್ಕಾಂ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿಗೀಡಾದ ವಿದ್ಯುತ್ ಕಂಬವನ್ನು ತೆರವುಗೊಳಿಸಲಾಯಿತು.