ಗದಗ: ಮೂವತ್ತಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಒಂದು ಪಲ್ಟಿಯಾಗಿ ಸಂಪೂರ್ಣ ಅಡಿಮೇಲಾದ ಭಯಾನಕ ಅಪಘಾತವೊಂದು ಸಂಭವಿಸಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಕಲಕೇರಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.
ಈ ಭೀಕರ ಅಪಘಾತಕ್ಕೆ ಒಳಗಾಗಿದ್ದು ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಇಳಕಲ್ ಮಾರ್ಗದ ಬಸ್. ಅಪಘಾತ ಸಂಭವಿಸುವ ಸಂದರ್ಭ ಬಸ್ನಲ್ಲಿ 30ಕ್ಕೂ ಅಧಿಕ ಪ್ರಯಾಣಿಕರಿದ್ದರು. ಆದರೆ ಬಸ್ ಪಲ್ಟಿಯಾಗಿ ಪೂರ್ತಿ ಅಡಿಮೇಲಾದರೂ ಬಸ್ನೊಳಗಿದ್ದ ಅಷ್ಟೂ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಲ್ಟಿಯಾದ ಬಸ್ನಿಂದ ಪ್ರಯಾಣಿಕರು ಗಾಜು ಒಡೆದು ಹೊರಗೆ ಬಂದಿದ್ದು, ಗಾಯಗೊಂಡವರನ್ನು ನರಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ಪ್ರಕರಣ ದಾಖಲಾಗಿದೆ.