ತುಮಕೂರು: ವಾಹನ ಚಲಾಯಿಸುವಾಗ ಮೊಬೈಲ್ಫೋನ್ ಬಳಸುವುದೇ ಅಪರಾಧ. ಹೀಗಿರುವಾಗ ಇಲ್ಲೊಬ್ಬ ಬಸ್ ಚಾಲಕ ಕಿಲೋಮೀಟರ್ಗಟ್ಟಲೆ ದೂರ ಮೊಬೈಲ್ಫೋನ್ ನೋಡುತ್ತಲೇ ಬಸ್ ಚಲಾಯಿಸಿ, ಪ್ರಯಾಣಿಕರ ಟೀಕೆಗೆ ತುತ್ತಾಗಿದ್ದಾನೆ.
ಬೆಂಗಳೂರಿನಿಂದ ಹಾನಗಲ್ ಕಡೆಗೆ ಸಾಗುತ್ತಿದ್ದ ವಾಯುವ್ಯ ಕರ್ನಾಟಕ ಸಾರಿಗೆಯ ಕೆಎ-27 ಎಫ್ 0777 ಸಂಖ್ಯೆಯ ಬಸ್ ಚಾಲಕ ತುಮಕೂರು-ಶಿರಾ ಹೆದ್ದಾರಿಯಲ್ಲಿ ಈ ಅಪರಾಧ ಎಸಗಿದ್ದಾನೆ. ಮೊಬೈಲ್ಫೋನ್ ನೋಡುತ್ತಲೇ ಸುಮಾರು 15 ಕಿಲೋಮೀಟರ್ ದೂರ ಈತ ಬಸ್ ಚಲಾಯಿಸಿದ್ದಾನೆ ಎನ್ನಲಾಗಿದೆ.
ಒಂದು ಕೈಯಲ್ಲಿ ಸ್ಟೇರಿಂಗ್, ಇನ್ನೊಂದು ಕೈಯಲ್ಲಿ ಮೊಬೈಲ್ ಫೋನ್ ಹಿಡಿದುಕೊಂಡು ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ ಆಡುತ್ತ ಬಸ್ ಚಲಾಯಿಸಿದ ಈತನ ವಿರುದ್ಧ ಇದೀಗ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಬಸ್ನಲ್ಲಿದ್ದ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದರೂ ಈತ ಲೆಕ್ಕಿಸದೇ ಮೊಬೈಲ್ಫೋನ್ ನೋಡುತ್ತಲೇ ಬಸ್ ಚಲಾಯಿಸುವುದನ್ನು ಮುಂದುವರಿಸಿದ್ದ ಎನ್ನಲಾಗಿದೆ. ಈತನ ಬೇಜವಾಬ್ದಾರಿಯ ಚಾಲನೆಯನ್ನು ಪ್ರಯಾಣಿಕರು ವಿಡಿಯೋ ಮಾಡಿಕೊಂಡಿದ್ದು, ಅದೀಗ ಎಲ್ಲೆಡೆ ಹರಿದಾಡಲಾರಂಭಿಸಿದೆ.