ಜಿಲ್ಲೆ

ಸುಟ್ಟ ಕಾರಿನಲ್ಲಿ ಶವ ಪತ್ತೆ ಪ್ರಕರಣ: ಪತ್ನಿಯ ಪ್ರೀತಿ ನಾಟಕ ನಂಬಿ ಹೋದವನಿಗೆ ಕಾದಿತ್ತು ದುರಂತ ಸಾವು!

ಹಾಸನ: ಚನ್ನರಾಯಪಟ್ಟಣ ಮಟ್ಟನವಿಲೆ ಬಳಿ ವ್ಯಕ್ತಿಯನ್ನು ಕಾರಿನ ಸಮೇತ ಸುಟ್ಟು ಕೊಲೆ ಮಾಡಿದ ಪ್ರಕರಣ ಹೊಸ ಟ್ವಿಸ್ಟ್ ಪಡೆದಿದೆ. ಹಿರಿಸಾವೆ ಪೊಲೀಸ್ ಪ್ರಕರಣ ಭೇದಿಸಿದ್ದು ಕೊಲೆಯ ರಹಸ್ಯ ತಿಳಿದು ಪೊಲೀಸರೇ ಒಂದು ಕ್ಷಣ ಬೆಚ್ಚಿದ್ದಾರೆ.

ಅಕ್ಟೋಬರ್ 28ರಂದು ಬೆಳ್ಳಂಬೆಳಗ್ಗೆ ಹಾಸನ ಚನ್ನರಾಯಪಟ್ಟಣ ಮಟ್ಟನವಿಲೆ ಗ್ರಾಮದ ಸಮೀಪ ಕಾರೋಂದು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಂಡುಬಂದಿತ್ತು. ಆತಂಕ ವಿಚಾರ ಅಂದ್ರೆ ಸುಟ್ಟ ಕಾರಿನ ಡಿಕ್ಕಿಯಲ್ಲಿ ವ್ಯಕ್ತಿಯ ಶವವೊಂದು ಕೂಡ ಪತ್ತೆಯಾಗಿತ್ತು. ಆದ್ರೆ, ಶವ ಪುರುಷನದ್ದೋ? ಅಥವಾ ಮಹಿಳೆಯದ್ದೋ? ಎಂಬುದು ಪತ್ತೆಯಾಗಿರಲಿಲ್ಲ. ಇದು ಹಿರಿಸಾವೆ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಆದ್ರೆ, ಸುಟ್ಟ ಕಾರಿನ ಇಂಜಿನ್​ ಆಧಾರದಲ್ಲಿ ತನಿಖೆ ಆರಂಭಿಸಿದ ಪೊಲೀಸರು ಕಾರಿನಲ್ಲಿ ಸಿಕ್ಕಿದ ಶವ 27 ವರ್ಷದ ದಿನೇಶ್ ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ಆತಂಕಕಾರಿ ವಿಚಾರ ಅಂದ್ರೆ ದಿನೇಶ್ ಕೊಲೆ ಮಾಡಿದ್ದು ಅತನ ಪತ್ನಿ 22 ವರ್ಷದ ಅಭಿಲಾಶಳೇ ಎಂಬುದು ಪತ್ತೆಯಾಗಿದೆ. ಇನ್ನು ಅಭಿಲಾಶಾಗೆ ಸಾಥ್ ನೀಡಿರೋದು ಆಕೆಯ ತಂದೆ ಮಂಜುನಾಥ ಹಾಗೂ ತಮ್ಮ ಬಸವರಾಜ್. ಚನ್ನರಾಯಪಟ್ಟಣದ ಲಕ್ಷ್ಮೀಪುರ ಗ್ರಾಮದ ದಿನೇಶ್ ಕೊಲೆಗೆ ಮುಖ್ಯ ಕಾರಣ ದಿನೇಶ್ ಎರಡನೇ ಮದುವೆಯಾಗಿದ್ದು. ಮೂಲತಃ ಕಾರು ಚಾಲಕನಾದ ದಿನೇಶ್ ತನ್ನ ಮೊದಲ ಪತ್ನಿ ಅಭಿಲಾಶ ಕಡೆಗಣಿಸಿ ಅಪ್ರಾಪ್ತ ಬಾಲಕಿಯನ್ನ ಮದುವೆಯಾಗಿದ್ದ ಎನ್ನಲಾಗಿದೆ. ಇದೇ ವಿಚಾರ ದಿನೇಶ್ ಕೊಲೆಗೆ ಮುಖ್ಯ ಕಾರಣವಾಗಿದೆ.

ಕಲಹ ಮಾಡಿಕೊಂಡಿದ್ದ ಗಂಡ ಎರಡನೇ ಮದುವೆಯಾದಾಗ ಮೊದಲ ಪತ್ನಿ ಅಭಿಲಾಶ ಗಂಡನನ್ನು ಮುಗಿಸಲು ಸ್ಕೆಚ್ ಹಾಕಿದ್ದಾಳೆ. ಇದರಂತೆ ಬೆಂಗಳೂರಲ್ಲಿ ವಾಸವಿದ್ದ ಅಭಿಲಾಶ ಪ್ರೀತಿಯ ನಾಟಕ ಆಡಿ ಬೆಂಗಳೂರಿಗೆ ದಿನೇಶನನ್ನ ಕರೆಸಿಕೊಂಡು ಕುಡಿಸಿ ನಂತರ ಆತನ ತಲೆಗೆ ಅಭಿಲಾಶ ಹಾಗೂ ಆಕೆ ತಂದೆ ಮಂಜುನಾಥ ಬಲವಾಗಿ ಹೊಡೆದು ಕೊಂದಿದ್ದಾರೆ. ನಂತರ ಯಾರಿಗೂ ಗುಮಾನಿ ಬರಬಾರದು ಎಂದು ಚನ್ನರಾಯಪಟ್ಟಣ ಮಟ್ಟನವಿಲೆ ರಸ್ತೆ ಬಳಿ ಗಂಡನ ಶವ ಕಾರಲ್ಲಿ ಇರಿಸಿ ಪೆಟ್ರೋಲ್ ಸುರಿದು ಕೃತ್ಯ ಎಸಗಿದ್ದರು.

ಆದ್ರೆ ಕಾರಿನ ಇಂಜಿನ್ ನಂಬರ್ ಆರೋಪಿಗಳನ್ನು ಹುಡುಕಲು ಮೆರವಾಗಿದೆ. ಸದ್ಯ ಮಾಡಿದ ತಪ್ಪಿಗೆ ಅಭಿಲಾಶ ಆಕೆಯ ತಮ್ಮ ಬಸವರಾಜ ಹಾಗೂ ತಂದೆ ಮಂಜುನಾಥ್ ಬಂಧನವಾಗಿದ್ದಾರೆ. ಹಿರಿಸಾವೆ ಪೊಲೀಸರು ಕೊಲೆ ನಡೆದ ಒಂದೇ ದಿನದಲ್ಲಿ ಪ್ರಕರಣ ಭೇದಿಸಿ ಆರೋಪಿಗಳಿಗೆ ಕೋಳ ತೊಡಿಸಿರೋದು ಜನರ ಮೆಚ್ಚುಗೆಗೆ ಕಾರಣವಾಗಿದೆ. (ದಿಗ್ವಿಜಯ ನ್ಯೂಸ್​)