More

    Web Exclusive |ಗ್ರಾಮೀಣ ಮಕ್ಕಳಿಗಿನ್ನು ಜಿಯೋ ಟಿವಿ ಮೂಲಕ ಪಾಠ…

    | ದೇವರಾಜ್ ಎಲ್. ಬೆಂಗಳೂರು

    ಸ್ಮಾರ್ಟ್​ಫೋನ್ ಇಲ್ಲದ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ನಿರಂತರವಾಗಿ ತೊಡಗಿಸಲು ಶೀಘ್ರದಲ್ಲೇ ಕೇಬಲ್ ಚಾನೆಲ್​ಗಳ ಮೂಲಕ ತರಗತಿಗಳು ಆರಂಭವಾಗಲಿವೆ.

    ವಿದ್ಯಾಗಮ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದು, ಸರ್ಕಾರಿ ಶಾಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಲಿಕೆಯಿಂದ ದೂರ ಉಳಿದಿದ್ದಾರೆ. ಇವರನ್ನು ಮತ್ತೆ ಕಲಿಕೆಯಲ್ಲಿ ತೊಡಗಿಸಲು ಕೇಬಲ್ ಚಾನೆಲ್​ಗಳ ಮೂಲಕ ಪಾಠ ಪ್ರವಚನಗಳ ವೀಡಿಯೋಗಳನ್ನು ಪ್ರಸಾರ ಮಾಡಲು ಜಿಯೋ ಟಿವಿ ಚಾನಲ್ ಮುಂದೆ ಬಂದಿದೆ.

    ರಿಲಯನ್ಸ್ ಜಿಯೋ ಇನ್ಫೋಕಾಂ ಲಿ. ಕಂಪನಿಯು ಹ್ಯಾಥ್​ವೇ ಮತ್ತು ಡೆನ್ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಸರ್ಕಾರಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪ್ರತಿ ನಿತ್ಯ 8 ಗಂಟೆಗಳ ಕಾಲ ಪಾಠ ಪ್ರವಚನ ಪ್ರಸಾರ ಮಾಡುವುದಕ್ಕೆ ಮುಂದೆ ಬಂದಿದೆ. ಶಿಕ್ಷಣ ಇಲಾಖೆ ಕೂಡ ಇದಕ್ಕೆ ಒಪ್ಪಿಗೆಯನ್ನು ಸೂಚಿಸಿದೆ.

    ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ(ಡಿಎಸ್​ಇಆರ್​ಟಿ) ‘ಸಂವೇದ’ ಹೆಸರಿನಲ್ಲಿ ತರಗತಿಗಳ ಆಧಾರದ ಮೇಲೆ ಸಂಪನ್ಮೂಲ ವ್ಯಕ್ತಿಗಳ ಮೂಲಕ ವೀಡಿಯೋ ಚಿತ್ರೀಕರಣ ಮಾಡಿದೆ. ಸದ್ಯ ದೂರದರ್ಶನದಲ್ಲಿ ಇದನ್ನು ಪ್ರಸಾರ ಮಾಡುತ್ತಿದ್ದು, ಇದಕ್ಕಾಗಿ 10 ದಿನಕ್ಕೆ 1 ಲಕ್ಷ ರೂ. ಪಾವತಿ ಮಾಡುತ್ತಿದೆ. ಇದರಿಂದ ಶಿಕ್ಷಣ ಇಲಾಖೆ ಆರ್ಥಿಕ ನಷ್ಟ ಉಂಟಾಗುತ್ತಿದ್ದು, ಕಡಿಮೆ ವೆಚ್ಚದಲ್ಲಿ ಪ್ರಸಾರ ಮಾಡುವ ಕೇಬಲ್ ಚಾನೆಲ್​ಗಳಾಗಿ ಟೆಂಡರ್ ಆಹ್ವಾನ ಮಾಡಿತ್ತು. ನೆಟ್​ವರ್ಕ್ 18 ಎಂಬ ಚಾನೆಲ್ ಹೊರತಾಗಿ ಯಾವುದೇ ವಾಹಿನಿಗಳು ಬಿಡ್ ಮಾಡಿಲ್ಲ.

    ಈ ಮಧ್ಯೆ ಜಿಯೋ ಕಂಪನಿಯು ಉಚಿತವಾಗಿ ಪ್ರಸಾರ ಮಾಡುತ್ತೇವೆಂದು ಮುಂದೆ ಬಂದಿರುವುದಕ್ಕೆ ಶಿಕ್ಷಣ ಇಲಾಖೆ ಇದಕ್ಕೆ ಒಪ್ಪಿಗೆ ಸೂಚಿಸಿದೆ. ಡಿಎಸ್​ಇಆರ್​ಟಿ ಈ ಮೊದಲು ಎಜುಸ್ಯಾಟ್ ಮೂಲಕ 5 ಸಾವಿರ ಸರ್ಕಾರಿ ಶಾಲೆಗಳಲ್ಲಿ ವೀಡಿಯೋ ಚಿತ್ರೀಕರಣದ ಪಾಠಗಳನ್ನು ಪ್ರಸಾರ ಮಾಡತ್ತಿತ್ತು. ಇದೀಗ ಕರೊನದಿಂದ ಇದಕ್ಕೂ ಬ್ರೇಕ್ ಬಿದ್ದಿದೆ. ಅಲ್ಲದೆ, ವಿದ್ಯಾಗಮ ಯೋಜನೆ ಬಗ್ಗೆ ಅಪಸ್ವರ ಕೇಳಿಬಂದ ಕಾರಣ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.

    ಹೀಗಿದೆ ಪ್ರಸಾರ ವಿಧಾನ: ಕೇಬಲ್ ವಾಹಿನಿಗಳ ಮೂಲಕ ವೀಡಿಯೋ ರೆರ್ಕಾಡಿಂಗ್​ಗಳನ್ನು ಪ್ರಸಾರ ಮಾಡಲು ಡಿಎಸ್​ಇಆರ್​ಟಿ ಸಿದ್ಧತೆ ನಡೆಸುತ್ತಿದೆ. ಮುಂದಿನ ತಿಂಗಳಲ್ಲಿ ಪ್ರಸಾರ ಆರಂಭವಾಗುವ ಸಾಧ್ಯತೆ ಹೆಚ್ಚಿದೆ. 8,9 ಮತ್ತು 10ನೇ ತರಗತಿಗೆ 4 ಗಂಟೆ, 4ರಿಂದ 7ನೇ ತರಗತಿ 2 ಗಂಟೆ, ಚಿಕ್ಕಮಕ್ಕಳಿಗೆ ಸೃಜನಾತ್ಮಕ ಚಟುವಟಿಕೆಗಳು ಅರ್ಧ ಗಂಟೆ, ಎಜುಸ್ಯಾಟ್ ವೀಡಿಯೋ ಪಾಠ ಅರ್ಧ ಗಂಟೆ, ಟೆಲಿ ಎಜುಕೇಷನ್ ಪಾಠ 1 ಗಂಟೆ ಸೇರಿದಂತೆ ಪ್ರತಿ ನಿತ್ಯ 8 ಗಂಟೆಗಳ ಕಾಲ ಪ್ರಸಾರ ಮಾಡಬೇಕಿದೆ.

    ಈ ಯೋಜನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಇವರ ಮಾರ್ಗದರ್ಶನದೊಂದಿಗೆ ಡಿಎಸ್​ಇಆರ್​ಟಿ ಅನುಷ್ಠಾನ ಮಾಡಬೇಕು. ಇದಕ್ಕಾಗಿ ಸರ್ಕಾರ ಅನುದಾನ ಒದಗಿಸಿದಲ್ಲಿ ಸದರಿ ಅನುದಾನದ ಮಿತಿಯೊಳಗೆ ಹಾಗೂ ಯಾವುದೇ ಕಾರಣಕ್ಕೂ ಅನುದಾನ ವ್ಯತ್ಯವಾಗದಂತೆ ಎಚ್ಚರವಹಿಸಬೇಕು. ರಾಜ್ಯವ್ಯಾಪ್ತಿ ಶಾಲಾ ಮಕ್ಕಳಿಗೆ ಕಾರ್ಯಕ್ರಮ ತಲುಪುವಂತೆ ಮಾಡಬೇಕು. ಕಾರ್ಯಕ್ರಮದ ಫಲಶೃತಿ ಬಾಹ್ಯ ಮೂಲದ ಮತ್ತು ಉತ್ತಮ ಸಂಸ್ಥೆಗಳ ಮೂಲಕ ಮೌಲ್ಯಮಾಪನಗೊಳಿಸಿ ವರದಿಯನ್ನು ಸರ್ಕಾರಕ್ಕೆ ಸಿದ್ಧಪಡಿಸಬೇಕು. ಅನುಷ್ಠಾನಕ್ಕೆ ಆರ್ಥಿಕ ಮತ್ತು ಭೌತಿಕ ಗುರಿಗಳನ್ನು ನಿಗದಿಪಡಿಸಬೇಕು ಅದರನ್ವಯ ಭರಿಸಲಾಗುವ ವೆಚ್ಚವದ ಮಾಹಿತಿಯನ್ನು ಪ್ರತಿ ತಿಂಗಳು ಇಲಾಖೆಗೆ ಕಳುಹಿಸಬೇಕೆಂದು ಸೂಚನೆ ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts