ಜಿಲ್ಲೆ

ಲೋಕ ಸಮರ 2024: ನನ್ನ ಪ್ರಕಾರ ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ನಾವು ಗೆಲ್ತೇವೆ, ಬಿಎಸ್​ವೈ ಭರವಸೆ

ಮೋಹನ್​ ಶೆಟ್ಟಿ

ಬಾಗಲಕೋಟೆ: ನಾಳೆ (ಏ.29) ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಬಾಕಿ ಉಳಿದಿರುವ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಪಕ್ಷದ ಪ್ರಚಾರಕ್ಕಾಗಿ ಬಾಗಲಕೋಟೆಗೆ ಆಗಮಿಸಲಿದ್ದಾರೆ. ಪ್ರಧಾನಿ ಬರುತ್ತಾರೆ ಎಂಬ ವಿಷಯವನ್ನು ಮುಂಚಿತವಾಗಿಯೇ ತಿಳಿದ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಬಿ.ಎಸ್​. ಯಡಿಯೂರಪ್ಪ ಇಂದೇ ಬಾಗಲಕೋಟೆಗೆ ಆಗಮಿಸಿದ್ದಾರೆ.

ಈ ಕುರಿತಂತೆ ಮಾತನಾಡಿದ ಬಿಎಸ್​ವೈ, "ಎಲ್ಲ ಕಡೆಗೂ ಮೋದಿ ಅವರ ಗಾಳಿ ಬೀಸುತ್ತಿದೆ. ವಾತಾವರಣ ನಮ್ಮ ನಿರೀಕ್ಷೆ ಮೀರಿ, ಉತ್ತಮವಾಗಿ ಸಾಗಿದೆ. ನನ್ನ ಪ್ರಕಾರ ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಮೊದಲ ಹಂತದ 14 ಕ್ಷೇತ್ರಗಳಲ್ಲಿ ಈಗಾಗಲೇ ಬಿಜೆಪಿ ಮುನ್ನಡೆ ಸಾಧಿಸಿದೆ. ಬಾಗಲಕೋಟೆಯಲ್ಲೂ ಎರಡು ಲಕ್ಷ ಮತಗಳಿಂದ ಗೆಲುವು ಗಳಿಸುತ್ತೇವೆ" ಎಂದು ಭರವಸೆ ವ್ಯಕ್ತಪಡಿಸಿದರು.

ಬರ ಪರಿಹಾರದ ವಿಚಾರಕ್ಕೆ ಕಾಂಗ್ರೆಸ್ ಮುಖಂಡರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಬಿಎಸ್​ವೈ, "ಸಿಎಂ, ಡಿಸಿಎಂ ಅವರನ್ನು ನಾನು ಕೇಳ್ತೇನೆ, ಇಷ್ಟು ದೊಡ್ಡದಾಗಿ ಪರಿಹಾರ ಹಣ ಕೊಟ್ಟರೂ ಸಹ ನೀವು ಸ್ಟ್ರೈಕ್ ಮಾಡ್ತೀರಿ ಅಂದ್ರೆ ನಿಮ್ಮ‌ ಉದ್ದೇಶವೇನು? ಕೇಂದ್ರ ಸರ್ಕಾರವನ್ನು ಬರೀ ದೂರಬೇಕು, ಅಪಪ್ರಚಾರ ಮಾಡಬೇಕು ಅನ್ನೋದು ಬಿಟ್ಟು ಬೇರೆ ಏನೂ ಕಾಣಲ್ಲ ಅಲ್ವಾ? ಉದ್ದೇಶಪೂರ್ವಕವಾಗಿ ಹೀಗೆ ವಿರೋಧ, ಹೋರಾಟ ಮಾಡುವುದು ಶೋಭೆ ತರುವಂತದ್ದಲ್ಲ. ಇದನ್ನು ನಾನು ಖಂಡಿಸ್ತೇನೆ" ಎಂದರು.