ಜಿಲ್ಲೆ

ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಮಾಜಿ ಉಪ ಮುಖ್ಯಮಂತ್ರಿ!

Webdesk - Ravikanth

ತುಮಕೂರು: ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಪ್ರಸಂಗವೊಂದು ನಡೆದಿದೆ. ಭಾಗಶಃ ಕುಸಿದಿದ್ದ ಸೇತುವೆಯೊಂದನ್ನು ನೋಡಲು ಹೋಗಿದ್ದಾಗ ಈ ಘಟನೆ ನಡೆದಿದೆ.

ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತುಮಕೂರು ಜಿಲ್ಲೆಯ ಗೊರವನಹಳ್ಳಿ-ತೀತಾ ರಸ್ತೆಯಲ್ಲಿನ ಸೇತುವೆ ಭಾಗಶಃ ಕುಸಿದಿತ್ತು. ಇಲ್ಲಿನ ಪರಿಸ್ಥಿತಿಯನ್ನು ವೀಕ್ಷಿಸಲು ಪರಮೇಶ್ವರ್ ಅವರು ಅಧಿಕಾರಿಗಳು ಹಾಗೂ ಇತರರೊಂದಿಗೆ ಅಲ್ಲಿಗೆ ತೆರಳಿದ್ದರು.

ಭಾಗಶಃ ಕುಸಿದಿದ್ದ ಸೇತುವೆ ಮೇಲೆಯೇ ನಿಂತು ವೀಕ್ಷಣೆ ಮಾಡುವ ಮೂಲಕ ಅವರು ಪರಿಸ್ಥಿತಿಯನ್ನು ಅವಲೋಕಿಸಿದ್ದರು. ಹಾಗೆ ವೀಕ್ಷಣೆ ಮಾಡಿ ಅವರು ಅಲ್ಲಿಂದ ತೆರಳಿ ಸ್ವಲ್ಪ ದೂರ ಸಾಗುತ್ತಿದ್ದಂತೆ ಸೇತುವೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಅದೃಷ್ಟವಶಾತ್, ಅವರು ಹಾಗೂ ಇತರರು ಅಷ್ಟರೊಳಗೇ ಅಲ್ಲಿಂದ ಮರಳಿದ್ದರಿಂದ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿಹೋಗಿದೆ.