ಹಾಸನ: ಕರೊನಾ ಸೋಂಕು ಹಾಗೂ ಸೋಂಕಿತರ ಸಾವಿನ ಪ್ರಮಾಣಗಳ ಹೆಚ್ಚಳ ಆಗಿರುವುದರಿಂದ ಅದನ್ನು ತಡೆಯಲು ಮತ್ತು ನಿಯಂತ್ರಣಕ್ಕೆ ತರುವ ಸಲುವಾಗಿ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ವಿಧಿಸಿದ್ದಲ್ಲದೆ ಹಲವಾರು ನಿರ್ಬಂಧಗಳನ್ನೂ ಹೇರಿದೆ. ಆ ಪೈಕಿ ಮದುವೆ ಕೂಡ ಒಂದು.
ಈಗಾಗಲೇ ನಿಗದಿ ಆಗಿರುವ ಮದುವೆಗಳು ಹೀಗೆ ನಿರ್ಬಂಧ ಇದ್ದಾಗ್ಯೂ ರಾಜ್ಯಾದ್ಯಂತ ನಡೆಯುತ್ತಿದ್ದು, ಅಲ್ಲಲ್ಲಿ ಕೋವಿಡ್ ನಿಯಮಗಳ ಉಲ್ಲಂಘನೆ ಆಗುತ್ತಿರುವುದು ಕೂಡ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಹಲವೆಡೆ ದಾಳಿ ನಡೆಸಿ ಕಲ್ಯಾಣ ಮಂಟಪದ ಮಾಲೀಕರು, ಗಂಡು-ಹೆಣ್ಣಿನ ಕಡೆಯ ಮುಖ್ಯಸ್ಥರ ಮೇಲೆ ಕೇಸು ದಾಖಲಿಸುತ್ತಿರುವ ಪ್ರಕರಣಗಳು ದಿನೇದಿನೆ ಕೇಳಿಬರುತ್ತಿದೆ.
ಇದನ್ನೂ ಓದಿ: ಉಸಿರುಗಟ್ಟಿ ನರಳಾಡಿದ ಕೋವಿಡ್ ಸೋಂಕಿತ; ಮಾಧ್ಯಮದವರಿಗೆ ತಿಳಿಸುತ್ತೇವೆ ಎಂದ ಮೇಲೆ ಆಸ್ಪತ್ರೆಗೆ ದಾಖಲಿಸಿಕೊಂಡ ಸಿಬ್ಬಂದಿ
ಅಂಥದ್ದೇ ಒಂದು ಪ್ರಕರಣದಲ್ಲಿ ಮಾಸ್ಕ್ ಧರಿಸದ ವಧುಗೆ ತಹಸೀಲ್ದಾರ್ ಅವರು ದಂಡ ವಿಧಿಸಿದ್ದಾರೆ. ಹಾಸನ ಜಿಲ್ಲೆಯ ಅರಕಲಗೂಡಿನ ಸ್ವಾಗತ್ ಕನ್ವೆನ್ಷನ್ ಹಾಲ್ನಲ್ಲಿ ಇಂದು ನಡೆಯುತ್ತಿದ್ದ ಮದುವೆ ಸಂದರ್ಭದಲ್ಲಿ ವಧು ಮಾಸ್ಕ್ ಧರಿಸಿರಲಿಲ್ಲ ಎಂಬ ಕಾರಣಕ್ಕೆ ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ಸ್ಥಳದಲ್ಲೇ ದಂಡ ವಿಧಿಸಿದ್ದಾರೆ. ಅಲ್ಲದೆ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಎರಡೂ ಕಡೆಯವರಿಗೆ ಸೂಚನೆ ನೀಡಿ ತೆರಳಿದ್ದಾರೆ.