ಕನಕಗಿರಿಯ 13ನೇ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ದಿನ ಕಾರ್ಯಕ್ರಮದಲ್ಲಿ ಹದಿಹರೆಯದ ಆಪ್ತ ಸಮಾಲೋಚಕ ಅಮೀನ್‌ಸಾಬ್ ಮಾತನಾಡಿದರು. 
ಜಿಲ್ಲೆ

ತಾಯಿಹಾಲಿನಿಂದ ರೋಗ ನಿರೋಧಕ ಶಕ್ತಿ ಹೆಚ್ಚಳ

ಶಶಿಧರ ಎಲ್

ಕನಕಗಿರಿ: ತಾಯಿಹಾಲು ಸೇವನೆಯಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ಹದಿಹರೆಯದ ಆಪ್ತ ಸಮಾಲೋಚಕ ಅಮೀನ್‌ಸಾಬ್ ಹೇಳಿದರು.

ಪಟ್ಟಣದ 13ನೇ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಸ್ತನ್ಯಪಾನ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಯಿಹಾಲಿನಲ್ಲಿ ಕೊಲೆಸ್ಟ್ರಾಮ್ ಇದ್ದು, ಇದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅಲ್ಲದೆ ತಾಯಿಹಾಲು ಸೇವನೆಯಿಂದ ಮಗು ಹಾಗೂ ತಾಯಿಯ ಬಾಂಧವ್ಯ ವೃದ್ಧಿಯಾಗುತ್ತದೆ. ಕನಿಷ್ಠ 6 ತಿಂಗಳು ಕಡ್ಡಾಯವಾಗಿ ತಾಯಿ ಮಗುವಿಗೆ ಹಾಲುಣಿಸಬೇಕು ಎಂದರು.

ಪ್ರತಿಯೊಬ್ಬರೂ ಪೌಷ್ಟಿ ಕ ಆಹಾರ ಸೇವನೆಗೆ ಒತ್ತು ನೀಡಬೇಕು. ಸ್ವಚ್ಛವಾಗಿ ಕೈ ತೊಳೆಯುವುದರ ಮೂಲಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಬಾಲ್ಯ ವಿವಾಹದಿಂದ ಆಗುವ ದುಷ್ಪರಿಣಾಮ ಕುರಿತು ವಿವರಿಸಿದರು. ಡಾ. ನೇಹನಾಜ್, ಅಂಗನವಾಡಿ ಕಾರ್ಯಕರ್ತೆಯರಾದ ಶಕುಂತಲಾ, ಪದ್ಮಾವತಿ, ಆಶಾ ಕಾರ್ಯಕರ್ತೆಯರಾದ ವಿದ್ಯಾ, ಪುಷ್ಪಾವತಿ ಇತರರಿದ್ದರು.