ಜಿಲ್ಲೆ

‘ಬ್ರ್ಯಾಂಡ್ ಬೆಂಗಳೂರಿ’ಗೆ ಬೇಕಿದೆ ಅನುದಾನದ ಬಲ

ಹರೀಶ್​​ ಕೆ.ಸಿ.

ಬೆಂಗಳೂರು:ರಾಜ್ಯದಲ್ಲಿ ಹೊಸದಾಗಿ ಕಾಂಗ್ರೆಸ್ ಅಥವಾ ಬಿಜೆಪಿ ಸರ್ಕಾರ ಬಂದಾಗ ತಮ್ಮ ಶಾಸಕರ ಕ್ಷೇತ್ರಗಳಿಗೆ ಹೆಚ್ಚು ಅನುದಾನ ನೀಡುವುದು ಹಿಂದಿನಿಂದಲೂ ವಾಡಿಕೆ. ರಾಜ್ಯದಲ್ಲಿ ಪ್ರಸ್ತುತ ಕಾಂಗ್ರೆಸ್ ಸರ್ಕಾರ ಇದೆ. ಈ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿರುವ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ 40 ಕೋಟಿ ರೂ. ಅನುದಾನ ಮಂಜೂರಾದರೆ, ಎಸ್.ಟಿ. ಸೋಮಶೇಖರ್ ಹೊರತಾಗಿ ಬಿಜೆಪಿ ಶಾಸಕರಿಗೆ ನಯಾಪೈಸೆಯೂ ಸಿಕ್ಕಿಲ್ಲ.

ನಗರದ 28 ವಿಧಾನಸಭಾ ಕ್ಷೇತ್ರಗಳಲ್ಲಿ 16 ಕ್ಷೇತ್ರಗಳಲ್ಲಿ ಬಿಜೆಪಿಯ ಹಾಗೂ 12 ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಅನುದಾನ ತಾರತಮ್ಯ, ಹಿಂದಿನ ಸರ್ಕಾರದಲ್ಲಿ ಅಮೃತ ನಗರೋತ್ಥಾನ ಹಾಗೂ ಮುಖ್ಯಮಂತ್ರಿ ನವ ನಗರೋತ್ಥಾನ ಯೋಜನೆಗಳಡಿ ಮಂಜೂರಾಗಿದ್ದ ಕೋಟ್ಯಂತರ ರೂ. ಅನುದಾನ ತಡೆ ಹಿಡಿಯಲಾಗಿದೆ. ಹೀಗಿದ್ದಾಗ, ಅನುದಾನ ತಾರತಮ್ಯವಾದರೆ ‘ಬ್ರ್ಯಾಂಡ್ ಬೆಂಗಳೂರು’ ಯೋಜನೆಗೆ ಬಲ ಇಲ್ಲದಂತಾಗಲಿದೆ.

ಬೆಂಗಳೂರನ್ನು ಸಂಚಾರಯುಕ್ತ, ಹಸಿರು, ಸ್ವಚ್ಛ, ಆರೋಗ್ಯಕರ, ಟೆಕ್ ಮತ್ತು ಜಲಸುರಕ್ಷಾ ವಿಭಾಗದಲ್ಲಿ ಬದಲಾವಣೆಗೆ ಆರಂಭಿಸಲಾದ ಯೋಜನೆಯಡಿ ನಾಗರಿಕರು, ಸಂಘ- ಸಂಸ್ಥೆಗಳು, ಎನ್‌ಜಿಒಗಳು ಹಾಗೂ ಕಂಪನಿಗಳಿಂದ ಸಾವಿರಾರು ಅಭಿಪ್ರಾಯಗಳು ಸಂಗ್ರಹವಾಗಿವೆ. ಆ ಸಲಹೆಗಳಿಗೆ ಪ್ರತಿಯಾಗಿ ಇದುವರೆಗೆ ಸರ್ಕಾರ ನಯಾಪೈಸೆಯನ್ನೂ ಮೀಸಲಿಟ್ಟಿಲ್ಲ. ಬಜೆಟ್‌ನಲ್ಲಿಯೂ ಅನುದಾನ ಇಟ್ಟಿಲ್ಲ.

ಮುಸುಕಿನ ಗುದ್ದಾಟ

ಹಿಂದಿನ ಬಿಜೆಪಿ ಸರ್ಕಾರವು ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಬಿಡುಗಡೆ ಮಾಡಿದ್ದ 8,149 ಕೋಟಿ ರೂ. ಪೈಕಿ 486 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಪ್ರಸ್ತುತ ಸರ್ಕಾರ ಕೈಬಿಟ್ಟಿದೆ. ಈ ಮೊತ್ತವನ್ನು ಬರೀ ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿದೆ. ಆದರೆ, ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಪ್ರತಿನಿಧಿಸುವ ಯಶವಂತಪುರ ಕ್ಷೇತ್ರಕ್ಕೆ ಅನುದಾನ ಒದಗಿಸಲಾಗಿದೆ. ಉಳಿದ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ನಯಾಪೈಸೆಯೂ ನೀಡಿಲ್ಲ. ಬಿಜೆಪಿ ಕ್ಷೇತ್ರಗಳಿಗೆ ಹಿಂದೆ ಮಂಜೂರಾಗಿದ್ದ ಅನುದಾನವನ್ನು ಈಗಿನ ಸರ್ಕಾರ ಹಿಂಪಡೆದಿದೆ. ಒಟ್ಟಿನಲ್ಲಿ ಅನದಾನ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ.

ಸಾಕಷ್ಟು ಅನುದಾನ, ಅಭಿವೃದ್ಧಿ ಗೌಣ

ಪ್ರತಿ ವರ್ಷವೂ ರಸ್ತೆ, ಒಳಚರಂಡಿ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಸೇರಿ ಸಿಲಿಕಾನ್ ಸಿಟಿ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಮಂಡಿಸುವ ಬಜೆಟ್‌ನಲ್ಲಿ ಭರಪೂರ ಯೋಜನೆಗಳನ್ನು ೋಷಿಸಲಾಗುತ್ತದೆ. ಇದಕ್ಕಾಗಿ ಅಂದಾಜು 10 ಸಾವಿರ ಕೋಟಿ ರೂ.ಗಳಿಗೂ ಅಧಿಕ ಅನುದಾನ ಮೀಸಲಿಡಲಾಗುತ್ತದೆ. ಅಮೃತ ನಗರೋತ್ಥಾನ ಹಾಗೂ ಮುಖ್ಯಮಂತ್ರಿ ನವ ನಗರೋತ್ಥಾನ ಯೋಜನೆ ಸೇರಿ ಇತರೆ ಕಾರ್ಯಕ್ರಮಗಳಡಿ ನೂರಾರು ಕೋಟಿ ರೂ. ಅನುದಾನ ಬಿಡುಗಡೆಯಾಗುತ್ತದೆ. ಕೇಂದ್ರ ಸರ್ಕಾರದಿಂದಲೂ ನೂರಾರು ಕೋಟಿ ರೂ. ಬರುತ್ತದೆ. ಹಲವು ಕಾರ್ಯಕ್ರಮಗಳಿಗೆ ವಿಶ್ವಬ್ಯಾಂಕ್ ನೆರವುನಿಂದ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಅನುದಾನ ಖರ್ಚು ಮಾಡಲಾಗುತ್ತಿದ್ದರೂ ಇಂದಿಗೂ ಸಿಲಿಕಾನ್ ಸಿಟಿ ಮೂಲಸೌಕರ್ಯ ಕೊರತೆಯಿಂದ ಹೊರಬಂದಿಲ್ಲ.

ಕೈಬಿಡಲಾದ ಪ್ರಮುಖ ಯೋಜನೆಗಳು

* ಮಿನರ್ವ ವೃತ್ತದಿಂದ ಹಡ್ಸನ್ ವೃತ್ತವರೆಗಿನ 253 ಕೋಟಿ ರೂ. ವೆಚ್ಚದ ಎಲಿವೇಟೆಡ್ ಕಾರಿಡಾರ್

* ಶಿವರಾಮ ಕಾರಂತ ಬಡಾವಣೆಗೆ 70 ಕೋಟಿ ರೂ. ವೆಚ್ಚದ ಸಂಪರ್ಕ ರಸ್ತೆ

* ಮುಖ್ಯಮಂತ್ರಿಗಳ ವಿವೇಚನಾ ನಿಧಿ: 11 ಕೋಟಿ ರೂ

* ಮೇಲ್ಸೇತುವೆಗಾಗಿ ಬಿಎಂಆರ್‌ಸಿನಲ್ಲಿ ಇಟ್ಟಿದ್ದ ಠೇವಣಿ: 45 ಕೋಟಿ ರೂ

* ದಾಸರಹಳ್ಳಿ ಕ್ಷೇತ್ರಕ್ಕೆ ನೀಡಲಾಗಿದ್ದ ಹೆಚ್ಚುವರಿ: 25 ಕೋಟಿ ರೂ.

* ಆರ್.ಆರ್.ನಗರ ಕ್ಷೇತ್ರದಲ್ಲಿ ಘನತ್ಯಾಜ್ಯ ನಿರ್ವಹಣೆಯ ಉಪಕರಣಗಳಿಗೆ ಹಂಚಿಕೆ ಮಾಡಿದ್ದ 15 ಕೋಟಿ ರೂ.

* ಕೆ.ಆರ್.ಪುರದ ಪೈ ಲೇಔಟ್‌ನಲ್ಲಿ ರಾಜಕಾಲುವೆಯ ಕಲ್ವರ್ಟ್ ನಿರ್ಮಾಣಕ್ಕೆ ನೀಡಲಾಗಿದ್ದ 14 ಕೋಟಿ ರೂ.

* ಪೌರಕಾರ್ಮಿಕರಿಗೆ ಸುರಕ್ಷತಾ ಉಪಕರಣಗಳ ಖರೀದಿಸಲು ನೀಡಿದ್ದ 15 ಕೋಟಿ ರೂ.